Wednesday, July 6, 2022

Latest Posts

ಇನ್ನಷ್ಟು ಹಿರಿಯ ಸಚಿವರ ಜೊತೆ ಮೋದಿ ವಿಸ್ತೃತ ಸಮಾಲೋಚನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೇಂದ್ರ ಸರಕಾರದ ಕಾರ್ಯನಿರ್ವಹಣೆ ಬಗ್ಗೆ ತಮ್ಮ ಸಹೋದ್ಯೋಗಿಗಳಿಂದ ಸಲಹೆಗಳು, ಅಭಿಪ್ರಾಯಗಳನ್ನು ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ಮಂಗಳವಾರ ಇನ್ನಷ್ಟು ಹಿರಿಯ ಸಚಿವರ ಜೊತೆ ಸಮಾಲೋಚನೆ ನಡೆಸಿದರು. ಪ್ರಧಾನಿ ಮೋದಿಯವರು ಅಧಿಕಾರ ವಹಿಸಿಕೊಂಡಂದಿನಿಂದಲೂ ತಮ್ಮ ಸಚಿವ ಸಹೋದ್ಯೋಗಿಗಳ ಜೊತೆ ಇಂತಹ ಪ್ರಜಾತಾಂತ್ರಿಕ ಸಮಾಲೋಚನಾ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಈಗ ಮಾಧ್ಯಮಗಳು ವಿಶೇಷ ಪ್ರಚಾರ ನೀಡುತ್ತಿರುವುದರಿಂದ ಗಮನ ಸೆಳೆದಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಪ್ರಧಾನಿಯವರು ಸಮಾಲೋಚನೆ ನಡೆಸಿದರು. ಈ ಸಂದರ್ಭ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕೂಡಾ ಪಾಲ್ಗೊಂಡಿದ್ದರು. ಸರಕಾರದ ಕಾರ್ಯನಿರ್ವಹಣೆಯ ಬಗ್ಗೆ ಅಭಿಪ್ರಾಯಗಳು, ಇನ್ನಷ್ಟು ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಸಲಹೆಗಳು, ವಿವಿಧ ಸಚಿವಾಲಯಗಳು ಕೋವಿಡ್ ಬಿಕ್ಕಟ್ಟಿನ ಸಂದರ್ಭ ತೋರಿದ ನಿರ್ವಹಣೆಗಳು, ಪಕ್ಷ ಮತ್ತು ಸರಕಾರದ ನಡುವೆ ಸಮನ್ವಯವನ್ನು ಇನ್ನಷ್ಟು ಬಲಗೊಳಿಸಲು ಕೈಗೊಳ್ಳಬೇಕಾದ ಕ್ರಮ ಇತ್ಯಾದಿಗಳ ಬಗ್ಗೆ ಚಿಂತನೆಗಳು ನಡೆದವು. ಹಾಗೆಯೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ , ವಿ.ಕೆ.ಸಿಂಗ್ ಮತ್ತಿತರರೂ ಸಮಾಲೋಚನೆಯಲ್ಲಿ ಸೇರ್ಪಡೆಗೊಂಡರು.
5 ಗಂಟೆಗಳಿಗೂ ಹೆಚ್ಚು ಕಾಲ ಇಂತಹುದೇ ಸಮಾಲೋಚನೆ ಕಳೆದ ಶುಕ್ರವಾರ ನಡೆದಿದ್ದು, ಈ ಸಂದರ್ಭ ಗೃಹಸಚಿವ ಅಮಿತ್ ಶಾ, ಕಾನೂನು ಸಚಿವ ರವಿಶಂಕರ್ ಪ್ರಸಾದ್, ಜೆ.ಪಿ.ನಡ್ಡಾ, ಸಂತೋಷ್ ಪಾಲ್ಗೊಂಡಿದ್ದರು.
ಇದು ನಿರಂತರ ಪ್ರಕ್ರಿಯೆ
ಇಂತಹ ಸಮಾಲೋಚನೆಗಳು ನಿರಂತರ ಪ್ರಕ್ರಿಯೆಯಾಗಿದ್ದು, ಇದೀಗ ಕೋವಿಡ್ ಹಿನ್ನೆಲೆಯಲ್ಲಿ ದೀರ್ಘಕಾಲದ ಬಳಿಕ ಇಂತಹ ನೇರ ಸಭೆಗಳು ನಡೆಯುತ್ತಿರುವ ಕಾರಣ ಗಮನ ಸೆಳೆದಿವೆ. ಕೊರೋನಾ ನಿರ್ವಹಣೆ, ಕೋವಿಡ್ ಬಿಕ್ಕಟ್ಟಿನ ಸಂದರ್ಭ ಸಚಿವಾಲಯಗಳು ಮಾಡಿರುವ ಸಾಧನೆಗಳು ಸೇರಿದಂತೆ ಪ್ರಮುಖ ವಿಷಯಗಳಿಗೆ ಸಂಬಂಧಿಸಿ ಉನ್ನತ ನಾಯಕರು ಈ ಸಮಾಲೋಚನೆ ನಡೆಯುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss