ಹೊಸದಿಗಂತ ವರದಿ, ಕೊಡಗು:
ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದ ಪ್ರವಾಸಿ ತಾಣ ರಾಜಾ ಸೀಟ್ ಗ್ಯಾಲರಿಯಲ್ಲಿ ನೂರಾರು ಮಕ್ಕಳಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರದ ವಿವಿಧ ಶಾಲೆಯ 500ಕ್ಕೂ ಹೆಚ್ಚು ಮಕ್ಕಳು ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ನಿಸಾರ್ ಅಹಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು..ಹಾಡುಗಳು ಮೇಳೈಸಿದವು.
ನಾಡಗೀತೆ ಹಾಡುವ ಮೂಲಕ ಲಕ್ಷ ಕಂಠ ಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭ ಕನ್ನಡ ಬಳಕೆಯ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳು, ಅಧಿಕಾರಿಗಳು ಸ್ವೀಕರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕ್ರೀಡಾ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಜಿಲ್ಲೆಯ ನೂರಾರು ಶಾಲೆ, ಕಾಲೇಜುಗಳಲ್ಲೂ ಕನ್ನಡ ಗೀತ ಗಾಯನ ಕಾರ್ಯಕ್ರಮ ಜರುಗಿತು.