ಮದರ್‌ ಥೆರೆಸ್ಸಾ ಬಗ್ಗೆ ಕಹಿಸತ್ಯಗಳನ್ನು ಬಿಚ್ಚಿಟ್ಟಿದೆ ಈ ಸಾಕ್ಷ್ಯಚಿತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮದರ್‌ ಥೆರೆಸಾ ಭಾರತದಾದ್ಯಂತ ಪ್ರಖ್ಯಾತಿ ಪಡೆದ ಕೈಸ್ತ ಸನ್ಯಾಸಿನಿ. ಕೋಲ್ಕತ್ತಾದ ಕೊಳೆಗೇರಿಗಳಲ್ಲಿ ಪ್ಲೇಗ್‌ ನಿಂದ ಬಿದ್ದು ಸಾಯುತ್ತಿದ್ದ ಬಡವರ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಎಂಬುದು ಅವರ ಬಗ್ಗೆ ಜಗತ್ತು ತಿಳಿದುಕೊಂಡಿರುವ- ನಂಬಿಕೊಂಡಿರುವ ವಿಚಾರ, ಇತಿಹಾಸ ಪುಸ್ತಕಗಳು ಸಹ ಇದನ್ನೇ ಹೇಳುತ್ತವೆ. ಮಾತೃವಾತ್ಸಲ್ಯದ ಚಿಲುಮೆ ಎಂದು ಕರೆಸಿಕೊಳ್ಳುವ ಥೆರೆಸ್ಸಾ ಇವೆಲ್ಲವುಗಳಿಂದಾಚೆಗೆ ಜಗತ್ತಿಗೆ ಕಾಣದಂತೆ ಬಚ್ಚಿಟ್ಟುಕೊಂಡಿದ್ದ ಕರಾಳ ಮುಖವಾಡವೊಂದಿತ್ತಾ? ಥೆರೆಸ್ಸಾ ಕುರಿತಾಗಿ ಹೊರಬರುತ್ತಿರುವ ಹೊಸ ಸಾಕ್ಷ್ಯಾಚಿತ್ರವೊಂದು ಇಂತಹದ್ದೊಂದು ಚರ್ಚೆ ಹುಟ್ಟುಹಾಕಿದೆ.
ನೋವು ನಿವಾರಣೆ ಅವರ ಉದ್ದೇಶವಾಗಿರಲಿಲ್ಲ…
ಮದರ್‌ ಥೆರೆಸ್ಸಾ ಬಗ್ಗೆ ತಯಾರಿಸಲಾಗಿರುವ ಸಾಕ್ಷ್ಯಚಿತ್ರ ಸರಣಿಯಾದ ʼಮದರ್‌ ಥೆರೆಸ್ಸಾ; ಫಾರ್‌ ದಿ ಲವ್‌ ಆಫ್‌ ಗಾಡ್‌ʼ ನಲ್ಲಿ ಅವರ ಇನ್ನೊಂದು ಮುಖವನ್ನು ತೆರೆದಿಡಲಾಗಿದೆ. ಮದರ್‌ ಥೆರೆಸ್ಸಾ ನಿಕಟವರ್ತಿಗಳು, ಅವರೊಂದಿಗೆ ಕಾರ್ಯನಿರ್ವಹಿಸಿದವರನ್ನು ಸಂದರ್ಶಿಸಿ ಈ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಒಂದೆಡೆ ಬಡತನ ನಿರ್ಮೂಲನೆ, ಶೋಷಿತರ ಪರವಾಗಿ ಮಾತನಾಡುತ್ತಿದ್ದ ಮದರ್‌, ತಮ್ಮ ಆಂತರಿಕ ಚಿಂತನೆಗಳಲ್ಲಿ ಜನರಿಗೆ ಬಡತನ ಇರುವುದೇ ಒಳ್ಳೆಯದೆಂದು ಭಾವಿಸಿದ್ದರು. ಜೀಸಸ್‌ ಕೂಡಾ ಬಡವನಾಗಿದ್ದ. ಆದ್ದರಿಂದ ಜನರು ಸಹ ಬಡವರಾಗಿರುವುದು ಒಳ್ಳೆಯದು ಎಂದು ಅವರು ಭಾವಿಸಿದ್ದರು. ಬಡತನದಿಂದ ಬಳಲುತ್ತಿದ್ದ ಜನರಿಗೆ ಸಹಾಯಹಸ್ತ ಚಾಚುವಾಗೂ ಇಂತಹದ್ದೊಂದು ಚಿಂತನೆಯಿಂದ ಬಳಲುತ್ತಿದ್ದರು. ಇದೊಂದು ಸ್ಕಿಜೋಫ್ರೇನಿಕ್ ನಡವಳಿಕೆಯಾಗಿತ್ತು ಎಂದು ಮದರ್ ತೆರೇಸಾ ಅವರೊಂದಿಗೆ 20 ವರ್ಷಗಳ ಕಾಲ ಕೆಲಸ ಮಾಡಿದ ಮೇರಿ ಜಾನ್ಸನ್ ಹೇಳುತ್ತಾರೆ.
ಚರ್ಚ್’ನ ಲೈಂಗಿಕ ಹಗರಣಗಳು ಹೊರಬೀಳದಿರುವುದರಲ್ಲಿ ಥೆರೆಸ್ಸಾ ಪಾತ್ರ
ಒಂದೆಡೆ ಜಾಗತಿಕವಾಗಿ ಶಾಂತಿ ಬೆಳಗಿಸಲು ಪ್ರಮುಖ ವ್ಯಕ್ತಿಗಳ ಸ್ನೇಹ ಸಂಪಾದಿಸುತ್ತಿದ್ದ ಥೆರೆಸ್ಸಾ, ಮತ್ತೊಂದೆಡೆ ಕ್ಯಾಥೋಲಿಕ್ ಚರ್ಚ್‌ನ ಹಗರಣಗಳನ್ನು ಮುಚ್ಚಿಹಾಕಿದರು. ಚರ್ಚಿನ ರೆವರೆಂಡ್ ಡೊನಾಲ್ಡ್ ಮೆಕ್‌ಗುಯಿರ್‌ ಮಕ್ಕಳ ಮೇಲೆ ನಡೆಸಿದ ದೌರ್ಜನ್ಯಗಳ ವಿಚಾರವಾಗಿ ಆಕೆಯ ನಿಲುವು ವಿವಾದಾಸ್ಪದವಾಗಿತ್ತು. ಮೆಕ್‌ಗುಯಿರ್‌ ಮೇಲೆ ತನಗೆ ʼವಿಶ್ವಾಸ ಮತ್ತು ನಂಬಿಕೆ’ ಎರಡೂ ಇದೆ ಎಂದು ಅಧಿಕಾರಿಗಳಿಗೆ ಪತ್ರ ಬರೆದಳು. ನೂರಾರು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದ ಮೆಕ್‌ಗುಯಿರ್‌ ಪ್ರಕರಣದಿಂದ ಪಾರಾಗಲು ಮದರ್‌ ಶ್ರೀರಕ್ಷೆಯಿತ್ತು ಎಂಬಿತ್ಯಾದಿ ವಿಚಾರಗಳ ಕುರಿತಾಗಿ ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಗಳಿವೆ.
ಮದರ್ ತೆರೇಸಾ ಅವರ ಜೀವಿತದ ಅಂತಿಮ ದಶಕವು ಅತ್ಯಂತ ಸವಾಲಿನದ್ದಾಗಿತ್ತು. ಅವರು ವೃದ್ದಾಪ್ಯದೊಂದಿಗೆ ಹೋರಾಡುತ್ತಿದ್ದರು. ಆದರೆ ಹೆಚ್ಚುತ್ತಿದ್ದ ಪಾದ್ರಿಗಳ ಮಕ್ಕಳ ನಿಂದನೆ ಹಗರಣಗಳಿಂದ ರಕ್ಷಿಸುವಂತೆ ಚರ್ಚ್‌ ಸಹಾಯ ಯಾಚಿಸುತ್ತಿತ್ತು. ಮದರ್‌ ವಿಷಯವೊಂದರ ಸಂಪೂರ್ಣ ನಿರೂಪಣೆಯನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದ್ದರು ಎಂದು ಮೇರಿ ವಿವರಿಸುತ್ತಾರೆ.
ಬ್ರಿಟೀಷ್‌ ವೈದ್ಯ ಜಾಕ್‌ ಫ್ರೇಗರ್‌ ಮತ್ತೊಂದು ವಿಚಾರವನ್ನು ತೆರೆದಿಡುತ್ತಾರೆ, ಮದರ್‌ ಥೆರೆಸ್ಸಾ ಜನಪ್ರಿಯತೆಯಿಂದ ಸಾಕಷ್ಟು ಹಣದ ಹೊಳೆಯೇ ಹರಿದುಬರುತ್ತಿತ್ತು. ಬಡವರಿಗೆ ಯೋಗ್ಯ ಆಸ್ಪತ್ರೆಗಳನ್ನು ಕಟ್ಟಿಸಲು ಅವರ ಬಳಿ ಸಾಕಷ್ಟು ಹಣವಿತ್ತು. ಆದರೆ ಅವರು ಎಂದಿಗೂ ಅವುಗಳನ್ನು ನಿರ್ಮಿಸಲಿಲ್ಲ.
ಏಕೆಂದರೆ ಜನರನ್ನು ರೋಗದಿಂದ ಅಥವಾ ನೋವಿನಿಂದ ಮುಕ್ತವಾಗಿಸುವುದು ಅವರ ಧಾರ್ಮಿಕ ನಂಬಿಕೆ ಆಗಿರಲೇ ಇಲ್ಲ. ಯೇಸು ಸಹ ಅನುಭವಿಸಿದ ‘ನೋವು’ ಉತ್ತಮ ಅಂಶ, ಈ ಹಂತದಲ್ಲಿ ನರಳುವಿಕೆಯಲ್ಲಿರುವವರಿಗೆ ದೇವರ ಸಂದೇಶ ಹೇಳಬೇಕು ಎಂಬುದು ಥೆರೆಸ್ಸಾ ಪ್ರಣೀತ ಸೇವಾ ಚಟುವಟಿಕೆಗಳ ಧ್ಯೇಯವಾಗಿತ್ತು.
ಬ್ರಿಟೀಷ್‌ ವೈದ್ಯ ಜಾಕ್‌ ಫ್ರೇಗರ್‌ ಈ ಸಾಕ್ಷ್ಯಚಿತ್ರದಲ್ಲಿ ಸಾಕ್ಷ್ಯ ನುಡಿದಿರುವ ಪ್ರಕಾರ, ಕ್ರೈಸ್ತ ಸನ್ಯಾಸಿನಿಯರು ರೋಗಿಗಳನ್ನು ಸರಿಯಾದ ಆರೈಕೆ ಮಾಡುತ್ತಿರಲಿಲ್ಲ. ಸೂಜಿಗಳನ್ನು ಶುದ್ಧೀಕರಿಸದೆ ಬಳಸಲಾಗುತ್ತಿತ್ತು. “ಸುಟ್ಟಗಾಯಗಳಿಂದ ಬಳಲುತ್ತಿದ್ದ ಒಬ್ಬಳು ಮಹಿಳೆಗೆ ಚಿಕಿತ್ಸೆ ನಿರಾಕರಿಸಲಾಗಿತ್ತು. ಆ ಬಳಿಕ ಆಕೆಗೆ ನಾನು ಗುಟ್ಟಾಗಿ ಚಿಕಿತ್ಸೆ ನೀಡಿದ್ದೆ” ಎಂದು ಹೇಳಿದ್ದಾರೆ. ಇಂತಹ ಹಲವಾರು ವಿಚಾರಗಳನ್ನು ಒಳಗೊಂಡಿರುವ ಸಾಕ್ಷ್ಯಚಿತ್ರವು ಮೇ. 9 ರಿಂದ ಸ್ಕೈ ಡಾಕ್ಯೂಮೆಂಟರಿಯಲ್ಲಿ ಪ್ರಸಾರವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!