ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಅಂಕೋಲಾ:
ಕೋವಿಡ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಬಳಿಗೇ ಹೋಗಿ ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಅವರು ಬುಧವಾರ ಆತ್ಮಸ್ಥೈರ್ಯ ತುಂಬಿದರಲ್ಲದೇ ಉಚಿತ ಔಷಧಿ ಒದಗಿಸುವ ಮೂಲಕ ಸರ್ಕಾರ ನಿಮ್ಮ ಜೊತೆಗೆ ಇದೆ ಎಂದು ಭರವಸೆ ಮೂಡಿಸಿದರು.
ಈ ಆಸ್ಪತ್ರೆಯಲ್ಲಿ 30 ಸೋಂಕಿತರಿದ್ದು, ಪಿ.ಪಿ.ಇ ಕಿಟ್ ಧರಿಸಿ ಕೋವಿಡ್ ವಾರ್ಡಿಗೆ ಹೋದ ರಾಜೇಂದ್ರ ನಾಯ್ಕ , ಸುಮಾರು 2 ಗಂಟೆಗಳ ಕಾಲ ಎಲ್ಲರನ್ನು ಭೇಟಿಯಾಗಿ, ಕೋವಿಡ್ ಬಗ್ಗೆ ಭೀತಿ ಬೇಡ, ಜಾಗೃತಿ ಇರಲಿ. ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿ ಬನ್ನಿ ಎಂದು ಧೈರ್ಯ ತುಂಬಿದರು. ತಾಲೂಕು ವೈದ್ಯಾಧಿಕಾರಿ ನಿತಿನ ಹೊಸಮೇಲಕರ್ ಔಷಧೀಯ ನೆರವು ಆಸ್ಪತ್ರೆ ಪರವಾಗಿ ಸ್ವೀಕರಿಸಿದರು.
ಸ್ಥೈರ್ಯ ತುಂಬಲು ನಿರ್ಧಾರ: ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೋವಿಡ್ ನಿರ್ಮೂಲನಕ್ಕೆ ಶಕ್ತಿ ಮೀರಿ ಪ್ರಯತ್ನ ನಡೆಸಿದ್ದರೂ, ವಿರೋಧ ಪಕ್ಷಗಳು ರಾಜಕಾರಣ ಮಾಡುತ್ತಿವೆ. ವಿನಾ ಕಾರಣ ಆರೋಪ ಮಾಡುವ ಮೂಲಕ ವೈದ್ಯರ, ದಾದಿಯರ ಮನೋಸ್ಥೈರ್ಯ ಕುಗ್ಗಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಿಮ್ಮ ಜೊತೆ ಇದೆ ಎಂಬ ಧೈರ್ಯ ತುಂಬಲು ಕೋವಿಡ್ ವಾರ್ಡಿನೊಳಗೆ ಹೋಗಿದ್ದೇನೆ ಎಂದರು.