ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಮೈಸೂರು:
ನಗರಾಭಿವೃದ್ಧಿ ಪ್ರಾಧಿಕಾರಗಳಿರುವುದು ಕೇವಲ ಬಡಾವಣೆಗಳನ್ನು ಅಭಿವೃದ್ಧಿ ಮಾಡುವುದು, ನಿವೇಶನ ರಹಿತರಿಗೆ ನಿವೇಶನ ಕೊಡುವುದು, ವಸತಿ ರಹಿತರಿಗೆ ಮನೆಕಟ್ಟಿಸಿಕೊಡುವುದಕ್ಕೆ ಮಾತ್ರವಲ್ಲ, ಜನರ ಆರೋಗ್ಯವನ್ನೂ ಕಾಪಾಡುವ ನಿಟ್ಟಿನಲ್ಲೂ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂಬುದನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತೋರಿಸಿಕೊಟ್ಟಿದೆ.
ಆ ಮೂಲಕ ರಾಜ್ಯದಲ್ಲಿರುವ ಎಲ್ಲಾ ನಿಗಮ, ಮಂಡಳಿಗಳು, ಪ್ರಾಧಿಕಾರಗಳಿಗೆ ಮಾದರಿಯಾಗಿ ನಿಂತಿದೆ. ಯಾವುದೇ ನಿಗಮ ಮಂಡಳಿ, ಪ್ರಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಗೆ ಮಾತ್ರ ಸೀಮಿತಗೊಂಡು ಕೆಲಸ ನಿರ್ವಹಿಸುತ್ತವೆ. ಆದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಜನರ ರಕ್ಷಣೆಗಾಗಿ ತನ್ನ ಕಾರ್ಯ ವ್ಯಾಪ್ತಿಯನ್ನು ಮೀರಿ ಕೆಲಸ ಮಾಡುತ್ತಿದೆ. ಕೊರೋನಾದಂತಹ ಸಾಂಕ್ರಾಮಿಕ ರೋಗ ತೀವ್ರ ಉಲ್ಬಣಗೊಂಡಿರುವ ಪರಿಸ್ಥಿತಿಯಲ್ಲಿ ಜನರ ಜೀವ ರಕ್ಷಣೆ ಮಾಡುವುದಕ್ಕೆ ಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಸಾಥ್ ನೀಡಿದೆ. ಜನರ ಜೀವ ಉಳಿಸುವ ನಿಟ್ಟಿನಲ್ಲಿ ಜನ ಸೇವೆಯ ಕೆಲಸವನ್ನು ಇದೀಗ ಮಾಡುತ್ತಿದೆ.
ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿನ ಆರ್ಭಟ ತೀವ್ರವಾಗುತ್ತಿದ್ದಂತೆ, ಬೆಂಗಳೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಸೋಂಕಿತರು ತಮ್ಮ ಜೀವ ಉಳಿಸಿಕೊಳ್ಳುವುದಕ್ಕಾಗಿ ಮೈಸೂರಿನಲ್ಲಿರುವ ಆಸ್ಪತ್ರೆಗಳಿಗೆ ಧಾವಿಸಿ ಬರುತ್ತಿದ್ದಾರೆ. ಇದರಿಂದಾಗಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಸೋಂಕಿತರಿoದ ತುಂಬಿ ತುಳುಕುತ್ತಿವೆ. ಹೊಸದಾಗಿ ಬರುತ್ತಿರುವ ಸೋಂಕಿತರಿಗೆ ಬೆಡ್, ಆಕ್ಸಿಜನ್ ವ್ಯವಸ್ಥೆ ಮಾಡುವುದೇ ಈಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಹಾಸ್ಟಲ್ಗಳು, ಖಾಲಿಯಿರುವ ಕಟ್ಟಡಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಪರಿವರ್ತಿಸಿ, ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಆದರೂ ಕೂಡ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರು ಚಿಕಿತ್ಸೆಗೆ ಬರುತ್ತಿದ್ದು, ಅದರಲ್ಲಿ ಗಂಭೀರ ಸ್ಥಿತಿಯಲ್ಲಿರುವವರಿಗೆ ಬೆಡ್ಗಳನ್ನು ಒದಗಿಸುವುದು ಕಷ್ಟ, ಸಾಧ್ಯವಾಗುತ್ತಿದೆ. ಜಿಲ್ಲಾಡಳಿತ ಗಂಭೀರ ಸ್ಥಿತಿಯಲ್ಲಿರುವವರಿಗೆ ಚಿಕಿತ್ಸೆಯ ವ್ಯವಸ್ಥೆ, ಬೆಡ್, ಆಕ್ಸಿಜನ್ ಸೌಲಭ್ಯ ಕಲ್ಪಿಸುವುದಕ್ಕೆ ಪ್ರತಿ ನಿತ್ಯವೂ ಹರ ಸಾಹಸ ನಡೆಸುತ್ತಲೇ ಇದೆ.
ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ, ಜನರ ಸಹಾಯಕ್ಕೆ ಧಾವಿಸಿದ್ದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ. ಕೊರೋನಾ ಸೋಂಕಿತರು ಎದುರಿಸುತ್ತಿರುವ ಸಮಸ್ಯೆಯನ್ನು ಅರಿತ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಅವರು, ಸೋಂಕಿತರಿಗೆ ಚಿಕಿತ್ಸೆ ದೊರಕಿಸಿಕೊಡುವುದಕ್ಕೆ ಮುಂದಾದರು.
ಆಗ ಅವರ ಕಣ್ಣಿಗೆ ಬಿದ್ದಿದ್ದು ನಗರದ ಜೆಎಲ್ಬಿ ರಸ್ತೆಯಲ್ಲಿರುವ ತುಳಸಿದಾಸ್ ಆಸ್ಪತ್ರೆ. ಆಧುನೀಕರಣಗೊಂಡಿದ್ದ ಈ ಆಸ್ಪತ್ರೆ ಇನ್ನು ಉದ್ಘಾಟನೆಯಾಗಿರಲಿಲ್ಲ. ಮೂಲ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿತ್ತು. ಇದನ್ನು ಮನಗಂಡ ಎಚ್,ವಿ.ರಾಜೀವ್ ಅವರು, ತುಳಸಿದಾಸ್ ಆಸ್ಪತ್ರೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ, ಆಸ್ಪತ್ರೆಯನ್ನು ಪ್ರಾರಂಭಿಸುವ ಮೂಲಕ ನೂರು ಹಾಸಿಗೆಗಳ ಚಿಕಿತ್ಸಾ ಸೌಲಭ್ಯವನ್ನು ದೊರಕಿಸಿಕೊಡಲು ತೀರ್ಮಾನಿಸಿದರು. ಆದರೆ ಆಸ್ಪತ್ರೆಯನ್ನು ಸಿದ್ಧಗೊಳಿಸಿದರೆ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿ ಬೇಕಲ್ಲವೇ. ಮೊದಲೇ ಸರ್ಕಾರಿ ಆಸ್ಪತ್ರೆಗಳು ವೈದ್ಯರು ನರ್ಸ್, ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಸ್ಥಿತಿಯಲ್ಲಿ ತುಳಸಿದಾಸ್ ಆಸ್ಪತ್ರೆಗೆ ಹೊಸದಾಗಿ ನೇಮಕಾತಿ ಮಾಡುವ ಪ್ರಕ್ರಿಯೆ ಕೂಡ ನಿಧಾನವಾಗುತ್ತದೆ ಎಂಬುದನ್ನು ಮನಗಂಡು, ಶ್ರೀಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ಅವರೊಂದಿಗೆ ಮಾತುಕತೆ ನಡೆಸಿದರು.
ಇದರ ಪರಿಣಾಮವಾಗಿ ತುಳಸಿದಾಸ್ ಆಸ್ಪತ್ರೆಯನ್ನು ಕೋವಿಡ್ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ನಿರ್ವಹಣೆಯನ್ನು ಮಾಡಲು ವಹಿಸಿಕೊಳ್ಳುವುದಾಗಿ ಕಾವೇರಿ ಆಸ್ಪತ್ರೆಯವರು ಒಪ್ಪಿಕೊಂಡರು. ಮುಡಾ ಹಾಗೂ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯವರ ಸಹಭಾಗಿತ್ವದಲ್ಲಿ ತುಳಸಿದಾಸ್ ಆಸ್ಪತ್ರೆ ಪ್ರಾರಂಭಗೊoಡು, ಇದೀಗ ಕೊರೋನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುವ ಮೂಲಕ ಸೋಂಕಿತರ ಜೀವ ಉಳಿಸುವ ಪ್ರಯತ್ನವನ್ನು ನಡೆಸುತ್ತಿದೆ. ಈ ಆಸ್ಪತ್ರೆಗೆ ಕೋವಿಡ್ ಮೊದಲನೇ ಅಲೆಯಲ್ಲಿ ವಿಕ್ರಮ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿ ಅನುಭವಹೊಂದಿರುವ ತಜ್ಞರನ್ನು ಕಾವೇರಿ ಆಸ್ಪತ್ರೆಯವರು ನೇಮಕ ಮಾಡಿದ್ದಾರೆ. 30 ವೈದ್ಯಕೀಯ ಸಿಬ್ಬಂದಿ ಹಾಗೂ 7 ಮಂದಿ ವೈದ್ಯರು ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಮೂಲ ಸೌಲಭ್ಯ ಒದಗಿಸಿದ ಮುಡಾ: ತುಳಸಿದಾಸ್ ಆಸ್ಪತ್ರೆಗೆ ಬೇಕಾಗಿದ್ದ ಹಾಸಿಗೆಗಳು, ವೈದ್ಯಕೀಯ ಉಪಕರಣಗಳು ಒದಗಿಸಿದೆ. ಕುಡಿಯುವ ನೀರು ಪೂರೈಕೆ, ವಿದ್ಯುತ್ ಸಂಪರ್ಕ ಮುಂತಾದ ಮೂಲ ಸೌಲಭ್ಯಗಳನ್ನು ಒದಗಿಸಿದೆ. ಇಲ್ಲಿರುವ ನೂರು ಹಾಸಿಗೆಗಳಲ್ಲಿ 70 ಹಾಸಿಗೆಗಳು ಆಕ್ಸಿಜನೇಟೆಡ್ ಎಂಬುದು ವಿಶೇಷವಾಗಿದೆ. ಇಷ್ಟು ಮಾತ್ರವಲ್ಲ, ಕಾವೇರಿ ಆಸ್ಪತ್ರೆಯವರು ನೇಮಕ ಮಾಡಿರುವ ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿಗೆ ನೀಡಲಾಗುವ ಮಾಸಿಕ ವೇತನದಲ್ಲಿ ಶೇ. 50ರಷ್ಟು ಹಣವನ್ನು ಮುಡಾದಿಂದಲೇ ನೀಡಲು ತೀರ್ಮಾನಿಸಲಾಗಿದೆ. ಉಳಿದ ಶೇ 50ರಷ್ಟು ವೇತನವನ್ನು ಕಾವೇರಿ ಆಸ್ಪತ್ರೆಯವರೇ ಭರಿಸಲಿದ್ದಾರೆ ಎಂಬುದು ವಿಶೇಷ.
ಇಷ್ಟು ಮಾತ್ರವಲ್ಲ ಮಾಸಿಕವಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯವರು ಕಳುಹಿಸಿಕೊಡುವ ಕೊರೋನಾ ಸೋಂಕಿತರಿಗೆ ನೀಡಲಾಗುವ ಔಷಧಿ ಮತ್ತಿತರರ ಚಿಕಿತ್ಸಾ ವೆಚ್ಚವಾಗಿ 15 ಲಕ್ಷ ರೂ ವೆಚ್ಚವಾಗುತ್ತದೆ. ಇದರಲ್ಲಿ ಅರ್ಧ ಮೊತ್ತವನ್ನು ಮುಡಾ ಭರಿಸಿದರೆ, ಉಳಿದ ಹಣವನ್ನು ಕಾವೇರಿ ಆಸ್ಪತ್ರೆಯವರು ಭರಿಸಲಿದ್ದಾರೆ. ವಿಶೇಷ ಎಂದರೆ ಮುಡಾ ಹಾಗೂ ಖಾಸಗಿ ಕಾವೇರಿ ಆಸ್ಪತ್ರೆಗೆ ತುಳಸಿದಾಸ್ ಆಸ್ಪತ್ರೆಯ ನಿರ್ವಹಣೆಯಿಂದ ಒಂದು ರೂ ಆದಾಯವಾಗಿ ಕೂಡ ಬರುವುದಿಲ್ಲ. ಬದಲಾಗಿ ಆಸ್ಪತ್ರೆಯ ನಿರ್ವಹಣೆಗೆ ಲಕ್ಷಾಂತರ ರೂ ಖರ್ಚು ಮಾಡುತ್ತಿವೆ. ಖಾಸಗಿ ಆಸ್ಪತ್ರೆಗಳೆಂದು ರೋಗಿಗಳನ್ನು ಸುಲಿಗೆ ಮಾಡುತ್ತಾರೆ ಎಂಬ ಅಪವಾದಕ್ಕೆ ವಿರುದ್ಧವಾಗಿ ಖಾಸಗಿ ಆಸ್ಪತ್ರೆಯಾದ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯವರು ಕೊರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಮುಡಾದವರು ಬರೀ ಸೈಟು, ಮನೆ ಮಾರಾಟ ಮಾಡಿ ಹಣಗಳಿಸುತ್ತಾರೆ ಎಂಬ ಅಪವಾದವನ್ನು ಈ ಮೂಲಕ ಹುಸಿಗೊಳಿಸಿ, ಜಿಲ್ಲಾಡಳಿತ, ಸರ್ಕಾರಕ್ಕೆ ಎಲ್ಲಾ ರೀತಿಯ ಹೊರೆಯನ್ನು ಮುಡಾದೊಂದಿಗೆ ಸೇರಿ ಕಡಿಮೆಗೊಳಿಸಿದ್ದಾರೆ.