ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಂಡ್ಯ :
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡ)ದಲ್ಲಿ ನಡೆದಿದ್ದ ನಿವೇಶನ ಹಂಚಿಕೆ ಸಂಬಂಧ 42 ಜನರಿಗೆ ಸಿಬಿಐ ವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಿದೆ.
ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ಮಂಡ್ಯ ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾನಾಗೇಂದ್ರ, 8 ಜನ ಅಧಿಕಾರಿಗಳು ಸೇರಿದಂತೆ 42 ಜನರಿಗೆ ಸಮನ್ಸ್ ನೀಡಿ ಜು.20ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ನಿವೇಶನ ಹಗರಣ
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2009ರಲ್ಲಿ ಅಧ್ಯಕ್ಷರಾಗಿದ್ದ ವಿದ್ಯಾನಾಗೇಂದ್ರಘಿ, ನಿರ್ದೇಶಕರಾಗಿದ್ದ ಎಂ.ಜೆ. ಚಿಕ್ಕಣ್ಣ ಹಾಗೂ ಶಾಸಕರಾಗಿದ್ದ ಸಿ.ಎಸ್. ಪುಟ್ಟರಾಜು, ರಮೇಶ್ ಬಂಡಿಸಿದ್ದೇಗೌಡ, ಎಂ. ಶ್ರೀನಿವಾಸ್ ಸೇರಿದಂತೆ ಇತರೆ ಅಧಿಕಾರಿಗಳು ಸಭೆ ನಡೆಸಿ 2009ರ ನವೆಂಬರ್ 20ರಂದು ಸ್ಥಳೀಯ ಪತ್ರಿಕೆಗಳಿಗೆ ನಿವೇಶನ ಹಂಚಿಕೆ ಕುರಿತಂತೆ ಜಾಹೀರಾತು ನೀಡಿದ್ದರು.
2009ರ ನ. 30ರೊಳಗೆ ಅರ್ಜಿ ಸಲ್ಲಿಸಲು ಕೊನೆ ದಿನವೆಂದು ಪ್ರಕಟಿಸಲಾಗಿತ್ತು. ರಾಜ್ಯ ಮಟ್ಟದ ಪತ್ರಿಕೆಗಳಿಗೆ ಯಾವುದೇ ಪ್ರಕಟಣೆಯನ್ನೂ ನೀಡಿರಲಿಲ್ಲ. ಪ್ರಕಟಣೆ ನೀಡುವುದಕ್ಕೂ ಮುನ್ನವೇ ಒಂದೇ ಕುಟುಂಬಕ್ಕೆ ಎರಡರಿಂದ ನಾಲ್ಕು ನಿವೇಶನಗಳನ್ನು ಹಂಚಿಕೆ ಮಾಡುವಂತೆ ಒಪ್ಪಂದ ಮಾಡಿಕೊಂಡು ಗೌಪ್ಯವಾಗಿ ಪತ್ರಿಕೆಗೆ ಪ್ರಕಟಣೆ ನೀಡಿದ್ದರೆನ್ನಲಾಗಿದೆ.
ಇದರಿಂದಾಗಿ ಮುಡಾಕ್ಕೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ ಸಾವಿರಾರು ಮಂದಿ ನಿವೇಶನರಹಿತರಿಗೆ ವಂಚನೆಯಾಗಿತ್ತು. ಈ ಬಗ್ಗೆ ವಿಚಾರ ತಿಳಿದ ಸಾಮಾಜಿಕ ಕಾರ್ಯಕರ್ತ ಕೆ.ಆರ್. ರವೀಂದ್ರ ಅವರು 2010ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿ ತನಿಖೆಗೆ ವಹಿಸಿತ್ತು.