spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಂಬಾನಿ ಮತ್ತು ಅದಾನಿ ನಡುವಿನ ವ್ಯಾಪಾರ ಸಮರ ನೋಡಲಿದೆಯೇ ಭಾರತ?

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಂಬಾನಿ ಮತ್ತು ಅದಾನಿ ಎಂಬ ಹೆಸರುಗಳು ಬಹುಶಃ ಮಕ್ಕಳಿಂದ ಹಿರಿವಯಸ್ಸಿನವರೆಗೆ ಭಾರತದಲ್ಲಿ ಬಹುತೇಕರೆಲ್ಲ ಗುರುತಿಸಬಹುದಾದ ಹೆಸರುಗಳು. ಸಿರಿವಂತಿಕೆ, ಉದ್ದಿಮೆಗಳಲ್ಲಿ ಅಗ್ರಶ್ರೇಣಿಯಲ್ಲಿರುವ ಮುಕೇಶ ಅಂಬಾನಿ ಹಾಗೂ ಗೌತಮ ಅದಾನಿ ಸಾಮ್ರಾಜ್ಯಗಳು ಈವರೆಗೆ ತೀರ ಮುಖಾಮುಖಿಯಾಗಿದ್ದಿಲ್ಲ. ಅಂದರೆ ಇಬ್ಬರ ಉದ್ಯಮ ಕ್ಷೇತ್ರಗಳು ಬೇರೆ ಬೇರೆಯಾಗಿದ್ದವು.

ಆದರೆ, ಇದೀಗ ಇಬ್ಬರ ಹಿತಾಸಕ್ತಿಗಳೂ ನಿಧಾನಕ್ಕೆ ಪರಸ್ಪರ ಪೈಪೋಟಿಗೆ ಬಂದು ನಿಂತಿರುವ ಪ್ರಾರಂಭಿಕ ಹಂತಕ್ಕೆ ಭಾರತ ಸಾಕ್ಷಿಯಾಗುತ್ತಿದೆ. ಇದು ಮುಂದುವರಿದಿದ್ದೇ ಆದರೆ ಉದ್ಯಮದ ಮದಗಜಗಳ ಸೆಣೆಸಾಟ ಯಾವ ಹಂತಕ್ಕೆ ಹೋಗಬಹುದೆಂಬ ಕದನ ಕುತೂಹಲವೊಂದು ಇದೀಗ ಸಹಜವಾಗಿ ಚಿಗಿತು ನಿಂತಿದೆ.

ಸಂಕ್ಷಿಪ್ತವಾಗಿ ವಿಷಯವಿಷ್ಟು: ನವೀಕೃತ ಇಂಧನಗಳ ಸುತ್ತಲಿನ ಉದ್ದಿಮೆಯಲ್ಲಿ ಹಳೆಯ ಮತ್ತು ಮುಖ್ಯ ಆಟಗಾರ ಅದಾನಿ ಸಾಮ್ರಾಜ್ಯ. ತಿಂಗಳ ಹಿಂದೆ ಮುಕೇಶ ಅಂಬಾನಿ ತಮ್ಮ ಕಂಪನಿಯೂ ನವೀಕೃತ ಇಂಧನಗಳ ಉದ್ದಿಮೆಯಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದರು. ಇದೀಗ, ಅದಕ್ಕೆ ಉತ್ತರವೋ ಎಂಬಂತೆ ಗೌತಮ ಅದಾನಿ ಅಹಮದಾಬಾದಿನಲ್ಲಿ ಪೆಟ್ರೊಕೆಮಿಕಲ್ ಕಂಪನಿಯೊಂದನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಟೆಲಿಕಾಂಗೆ ತಿರುಗಿಕೊಳ್ಳುವುದಕ್ಕಿಂತ ಮೊದಲು ಅಂಬಾನಿ ಸಾಮ್ರಾಜ್ಯ ಬೆಳೆದಿದ್ದು ಪೆಟ್ರೊಕೆಮಿಕಲ್ ಉದ್ಯಮದ ಮೇಲೆಯೇ ಎಂಬುದು ಗೊತ್ತಿರುವ ಸಂಗತಿಯೇ. 

ನವೀಕೃತ ಶಕ್ತಿಮೂಲ- ಇದು ಅದಾನಿ ಸಾಮ್ರಾಜ್ಯ 

ಭಾರತದ ಕ್ಲೀನ್ ಎನರ್ಜಿ ವಿಭಾಗದಲ್ಲಿ 2030ರ ವೇಳೆಗೆ ಅತಿದೊಡ್ಡ ಪಾಲು ಹೊಂದಿರಬೇಕು ಎಂಬ ಗುರಿಯಿಟ್ಟುಕೊಂಡು ಗೌತಮ ಅದಾನಿಯ ಸಾಮ್ರಾಜ್ಯ ಮುಂದುವರಿಯುತ್ತಿತ್ತು. ಹೀಗಿರುವಾಗ ಜೂನ್ ಕೊನೆ ವಾರದಲ್ಲಿ ಮುಕೇಶ ಅಂಬಾನಿ ತಾವು ನವೀಕೃತ ಸ್ವಚ್ಛ ಶಕ್ತಿಮೂಲಗಳ ವಿಭಾಗದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 75,000 ಕೋಟಿ ರುಪಾಯಿಗಳನ್ನು ಹೂಡುವುದಾಗಿ ಘೋಷಿಸಿದರು. 

ಈ ಘೋಷಣೆ ಬೆನ್ನಲ್ಲೇ, ಕಳೆದ ಕೆಲವರ್ಷಗಳಿಂದ ಯದ್ವಾತದ್ವಾ ಏರಿಕೊಂಡಿದ್ದ ಅದಾನಿ ಗ್ರೀನ್ ಎನರ್ಜಿ ಷೇರು ಬೆಲೆ ರಪ್ಪಂತ ಕೆಳಗೆ ಬಿತ್ತು. 

ಬಂದರು, ವಿದ್ಯುತ್, ಗ್ಯಾಸ್ ಹೀಗೆ ಹಲವು ವಿಭಾಗಗಳಲ್ಲಿ ಬೆಳೆದುಕೊಂಡು ಬಂದಿರುವ ಅದಾನಿ ಸಾಮ್ರಾಜ್ಯ 2015ರಲ್ಲಿ ದೊಡ್ಡ ಬಂಡವಾಳದೊಂದಿಗೆ ಸ್ಥಾಪಿಸಿದ ಕಂಪನಿ ಅದಾನಿ ಗ್ರೀನ್ ಎನರ್ಜಿ. 11 ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ಉದ್ದಿಮೆ, ಪ್ರಸ್ತುತ ಸೌರ ವಿದ್ಯುತ್ ವಿಭಾಗದಲ್ಲಿ 3,029 ಮೆಗಾವ್ಯಾಟ್ ಹಾಗೂ ಪವನ ವಿದ್ಯುತ್ ವಿಭಾಗದಲ್ಲಿ 497 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಇನ್ನೂ ದೊಡ್ಡ ಸಾಮರ್ಥ್ಯದ ಯೋಜನೆಗಳೆಲ್ಲ ಮುಂದೆ ಸಾಕಾರವಾಗಲಿಕ್ಕಿವೆ. ಸಾಫ್ಟ್ ಬ್ಯಾಂಕ್ ಲೋನ್, ಅಂತಾರಾಷ್ಟ್ರೀಯ ಕಂಪನಿಗಳ ಜತೆ ಒಪ್ಪಂದ ಹೀಗೆ ಹಲವು ರೀತಿಯಲ್ಲಿ ಅದಾನಿ ಸಾಮ್ರಾಜ್ಯವು ಸ್ವಚ್ಛ ಶಕ್ತಿಮೂಲಗಳ ಉದ್ದಿಮೆಯಲ್ಲಿ ಮುಂದಿದೆ.

ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಬಲ್ಲ ಅಂಬಾನಿ

ಹೀಗೆ ಗ್ರೀನ್ ಎನರ್ಜಿ ವಿಷಯದಲ್ಲಿ ಅದಾನಿ ಸಾಮ್ರಾಜ್ಯ ಮುಂದಿದ್ದರೂ ಅಲ್ಲಿ ಅಂಬಾನಿಯ ಆಗಮನ ಎಂಥವರಿಗೂ ತಲೆನೋವು ತರುವ ಸಂಗತಿಯೇ. ಏಕೆಂದರೆ ಟೆಲಿಕಾಂನಲ್ಲಿ ತಡವಾಗಿ ಬಂದೂ ಹಳೆಹುಲಿಗಳನ್ನೆಲ್ಲ ಮಲಗಿಸಿರುವ ಅಂಬಾನಿ ಉದ್ದಿಮೆಯ ಝಲಕನ್ನು ಭಾರತವೇ ನೋಡಿದೆ. 

ಇದೀಗ ಅದಾನಿ ಪ್ರತಿ ಕಾರ್ಯತಂತ್ರ ಎಂಬಂತೆ ಪೆಟ್ರೊಕೆಮಿಕಲ್ ಕಂಪನಿ ರಿಜಿಸ್ಟರ್ ಮಾಡಿ ಕುಳಿತಿದ್ದಾರಲ್ಲ, ಅಲ್ಲೂ ಸ್ಪಷ್ಟ ಗುರಿ ಮತ್ತು ಕಾರ್ಯತಂತ್ರಗಳ ಕೊರತೆ ಇದೆ ಅಂತಲೇ ಪರಿಣತರು ವಿಶ್ಲೇಷಿಸುತ್ತಿದ್ದಾರೆ. ಏಕೆಂದರೆ ಸಂಸ್ಕರಣಾ ಘಟಕಗಳು, ಸಾಗಬೇಕಾದ ನೀಲನಕ್ಷೆ ಇವ್ಯಾವವೂ ಇಲ್ಲದೇ ಅವಸರದಲ್ಲಿ ಒಂದು ಕಂಪನಿ ಹುಟ್ಟುಹಾಕಿದಂತಿದ್ದು, ಇದು ಅಂಬಾನಿಗೆ ಪೈಪೋಟಿ ಎನ್ನುವ ಮಟ್ಟದಲ್ಲೇನೂ ಸದ್ಯಕ್ಕೆ ನಿರೀಕ್ಷೆ ಹುಟ್ಟಿಸಿಲ್ಲ. 

ಸದ್ಯಕ್ಕೆ ಅಂಬಾನಿ ಅಶ್ವಮೇಧದ ಕುದುರೆ ಎಲ್ಲೆಡೆ ನುಗ್ಗುತ್ತಿದೆ. ತೀರ ತನ್ನ ಬುಡಕ್ಕೇ ಬಂದಾಗ ಅದನ್ನು ಕಟ್ಟಿಹಾಕುವುದರಲ್ಲಿ ಅದಾನಿ ಸಾಮ್ರಾಜ್ಯ ತನ್ನ ಶಕ್ತಿ ವ್ಯಯಿಸದೇ ಇರದು. ಈ ಸಮರದ ಕಂಪನಗಳು ಯಾರನ್ನೆಲ್ಲ ತಡವಿಯಾವು ಎಂಬುದೂ ಈಗಿರುವ ಕದನ ಕುತೂಹಲದ ಭಾಗವೇ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss