ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅತಿದೊಡ್ಡ ಉದ್ಯಮಿ, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರನ್ನು ಕೊಲ್ಲುವುದಾಗಿ ಮತ್ತೊಮ್ಮೆ ಬೆದರಿಕೆ ಬಂದಿದೆ. ಇಮೇಲ್‌ನಲ್ಲಿ ಬಂದಿರುವ ಬೆದರಿಕೆ ಸಂದೇಶದಲ್ಲಿ ಈ ಬಾರಿ 200ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಹಿಂದಿನ ಬೆದರಿಕೆ ಇಮೇಲ್‌ಗೆ ಪ್ರತಿಕ್ರಿಯಿಸದ ಕಾರಣ, 20 ಕೋಟಿಯಿಂದ ರೂ. 200 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರಿಗೆ ಇಮೇಲ್ ಖಾತೆಯಿಂದ ಕೊಲೆ ಬೆದರಿಕೆ ಬಂದಿತ್ತು. ಆಗಿನ ಮೇಲ್‌ಗೆ ಪ್ರತಿಕ್ರಿಯಿಸದ ಕಾರಣ ಮೊತ್ತ 200ಕೋಟಿಗೆ ಏರಿಕೆಯಾಗಿದೆ. ಹಣ ಕೊಡದಿದ್ದರೆ ನಾವು ಡೆತ್ ವಾರೆಂಟ್‌ಗೆ ಸಹಿ ಹಾಕುತ್ತೇವೆ ಎಂದು ದುಷ್ಕರ್ಮಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ತಮ್ಮ ಬಳಿ ಅತ್ಯುತ್ತಮ ಶೂಟರ್‌ಗಳಿದ್ದಾರೆ ಎಂದು ಹೇಳಿದ್ದು, 200 ಕೋಟಿ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಮುಕೇಶ್ ಅಂಬಾನಿ ಅವರ ಭದ್ರತಾ ಉಸ್ತುವಾರಿ ನೀಡಿದ ದೂರಿನ ಆಧಾರದ ಮೇಲೆ ಮುಂಬೈನ ಗಾಮ್‌ದೇವಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಸೆಕ್ಷನ್ 387 ಮತ್ತು 506(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮುಕೇಶ್ ಅಂಬಾನಿಗೆ ಕೊಲೆ ಬೆದರಿಕೆ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಬಿಹಾರದ ದರ್ಬಂಗಾದ ವ್ಯಕ್ತಿ ಮುಕೇಶ್ ಅಂಬಾನಿ ಮತ್ತವರ ಕುಟುಂಬ ಸದಸ್ಯರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದರು.