ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಶ್ರೇಷ್ಠ ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶನಿವಾರ ಚಲನಚಿತ್ರ ರಂಗದ ಖ್ಯಾತ ನಾಯಕ ನಟ, ನಿರ್ದೇಶಕ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ಕುಟುಂಬ ಸಮೇತರಾಗಿ ಭೇಟಿ ನೀಡಿದರು.
ಶ್ರೀ ದೇವಳಕ್ಕೆ ಆಗಮಿಸಿದ ಅವರು ಸಂಕಲ್ಪ ನೆರವೇರಿಸಿ ಶ್ರೀ ದೇವರಿಗೆ ಮಹಾಭಿಷೇಕ ಸೇವೆ ಸಮರ್ಪಿಸಿದರು.
ಬಳಿಕ ಶ್ರೀ ದೇವರ ಮಹಾಪೂಜೆ ವೀಕ್ಷಿಸಿದರು. ಅವರಿಗೆ ದೇವಳದ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು.
ಬಳಿಕ ಅವರು ಹೊಸಳಿಗಮ್ಮನ ದರುಶನ ಮಾಡಿ ಪ್ರಸಾದ ಸ್ವೀಕರಿಸಿ ಶ್ರೀ ದೇವಳದಲ್ಲಿ ಭೋಜನ ಪ್ರಸಾದ ಸ್ವೀಕರಿಸಿದರು.
ಶ್ರೀ ದೇವಳದಿಂದ ಗೌರವ
ಬಳಿಕ ಆಡಳಿತ ಕಚೇರಿಗೆ ಆಗಮಿಸಿದ ಪ್ರಭುದೇವ ಮತ್ತು ಅವರ ಪತ್ನಿ ಹಿಮಾನಿ ಹಾಗೂ ಮಗಳು ಶಿಯಾ ಅವರನ್ನು ಶ್ರೀ ದೇವಳದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಶಾಲು ಹೊದಿಸಿ ಫಲಪುಷ್ಪ ಮತ್ತು ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭ ದೇವಳದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಯೇಸುರಾಜ್, ಶಿಷ್ಠಾಚಾರ ಅಧಿಕಾರಿ ಜಯರಾಮ್ ರಾವ್, ಶ್ರೀ ದೇವಳದ ಶೇಷ ಭಟ್ ಉಪಸ್ಥಿತರಿದ್ದರು.