Thursday, August 11, 2022

Latest Posts

ಮುಂಡಗೋಡ| ಮೊಬೈಲ್ ಅಂಗಡಿ, ಫೋಟೋ ಸ್ಟುಡಿಯೋದಲ್ಲಿ ನಡೆದ ಕಳ್ಳತನ: ಆರೋಪಿ ಬಂಧನ

 ಹೊಸ ದಿಗಂತ ವರದಿ, ಮುಂಡಗೋಡ: 

ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿ ಮೊಬೈಲ್ ಅಂಗಡಿ ಹಾಗೂ ಫೋಟೋ ಸ್ಟುಡಿಯೋ ಕಳ್ಳತನ ಮಾಡಿದ್ದ, ಕಳ್ಳನನ್ನು ಬಂಧಿಸಿ ಆತನಿಂದ 1.50 ಲಕ್ಷ ರೂಪಾಯಿ ಮೌಲ್ಯದ ವಿಡಿಯೋ ಕ್ಯಾಮರಾ ಹಾಗೂ 20 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಾಳಬಾವಿಕೇರಿ ಗ್ರಾಮದ ಇಮಾಮಸಾಬ ಅಲ್ಲಿ ಬಾಯಿ (21) ಬಂಧಿತ ಆರೋಪಿಯಾಗಿದ್ದಾನೆ. ಈತನು ಸೆ.3ರಂದು ಬೆಳಿಗ್ಗೆ 4.30ರ ಸುಮಾರಿಗೆ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ಶ್ರೀಧರ ಉಪ್ಪಾರ ಎಂಬುವರ ಶ್ರೀಮೊಬೈಲ್ ಅಂಗಡಿಯಲ್ಲಿ ಮೇಲ್ವಾವಣಿಯಿಂದ ಕೆಳಗೆ ಇಳಿದ ಬೆಲೆಬಾಳುವ ಮೊಬೈಲ್‌ಗಳನ್ನು ಹಾಗೂ ಉಮೇಶ ಕಲಾಲ ಎಂಬುವರ ಶಕ್ತಿ ಪೋಟೊ ಸ್ಟುಡಿಯೋದಲ್ಲಿ ಬೆಲೆಬಾಳುವ ಪೋಟೋ ಕ್ಯಾಮೆರಾ, ವಿಡಿಯೋ ಕ್ಯಾಮೆರಾ, ರುಟರ್ ಡಿವಿಆರ್, ಹಾಗೂ ಹಾರ್ಡ್ ಡಿಸ್ಕ್ ಸೇರಿದಂತೆ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಯು ಕಳ್ಳತನ ಮಾಡುವಾಗ ಮೊಬೈಲ ಅಂಗಡಿಯಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈತನ ಮುಖ ಸ್ಪಷ್ಟವಾಗಿ ಸೇರಿಯಾಗಿತ್ತು. ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರಿಗೆ ಇದು ಸಹಕಾರಿಯಾಗಿದೆ.
ದಾರವಾಡ ಜಿಲ್ಲೆಯ ನರಗುಂದದಿoದ ಬಸ್‌ನಲ್ಲಿ ಬಂದಿದ್ದ ಕಳ್ಳ ಇಮಾಮಸಾಬ ಸಂಜೆವರೆಗೂ ಮುಂಡಗೋಡದಲ್ಲಿ ತಿರುಗಾಡಿದ್ದ. ಆಗ, ಕೆಲವು ಅಂಗಡಿಗಳನ್ನು ನೋಡಿದ್ದ. ರಾತ್ರಿ ಬಸ್ ನಿಲ್ದಾಣದಲ್ಲಿಯೇ ಮಲಗಿ, ನಸುಕಿನಲ್ಲಿ ಕಳ್ಳತನ ಮಾಡಿಕೊಂಡು, ಮತ್ತೆ ಬಸ್ ನಿಲ್ದಾಣದಲ್ಲಿಯೇ ಒಂದೆರೆಡು ಗಂಟೆ ಕಳೆದಿದ್ದಾನೆ. ಬೆಳಿಗ್ಗೆ ಬಸ್ ಹತ್ತಿ ನರಗುಂದಕ್ಕೆ ಹೋಗಿದ್ದನಂತೆ.
ಬoಧಿತ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಕದ್ದ ವಸ್ತುಗಳನ್ನು ಹೈವೆಯಲ್ಲಿ ನಿಂತು ಮನಸ್ಸಿಗೆ ಬಂದ ದರದಲ್ಲಿ ಮಾರಾಟ ಮಾಡುತ್ತಿದ್ದನಂತೆ. ಹಾಗೂ ಟ್ರ‍್ಯಾಕ್ಟರ್ ಒಂದನ್ನು ಕದ್ದು ಅದನ್ನು ಬಾಡಿಗೆಯಾಗಿ ಕೆಲವು ದಿನಗಳ ಕಾಲ ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಈತನಿಗೆ ನರಗುಂದಕ್ಕೆ ಹೋಗಲು ದುಡ್ಡು ಇರಲಿಲ್ಲವೆಂದು ಮೊದಲಿಗೆ ಫೋಟೋ ಸ್ಟುಡಿಯೋಗೆ ಕನ್ನ ಹಾಕಿದ್ದಾನೆ. ಅಲ್ಲಿ ದುಡ್ಡು ಸಿಕ್ಕಿಲ್ಲ. ನಂತರ ಮೊಬೈಲ್ ಅಂಗಡಿ ಕಳ್ಳತನ ಮಾಡಿದ್ದಾನೆ. ಅಲ್ಲಿ ಮೊಬೈಲ್‌ಗಳ ಸಮೇತ 100ರೂಪಾಯಿ ಸಿಕ್ಕಿದೆ. ಅದನ್ನು ತೆಗೆದಿಕೊಂಡು ಊರಿಗೆ ಹೋಗಿರುವುದಾಗಿ ಪೊಲೀಸರ ಮುಂದೆ ಆರೋಪಿ ಬಾಯಿ ಬಿಟ್ಟಿದ್ದಾನೆ.
ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಬದರಿನಾಥ, ಶಿರಸಿ ಪೊಲಿಸ್ ಉಪಾಧೀಕ್ಷಕರಾದ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಿದ್ಧಪ್ಪ ಸಿಮಾನಿ ಅವರ ನೇತೃತ್ವದಲ್ಲಿ, ಪಿಎಸ್‌ಐ ಬಸವರಾಜ ಮಬನೂರ, ಪಿ.ಎಸ್.ಐ ಸಂಗಪ್ಪ ಜಕ್ಕಣವರ ಹಾಗೂ ಪೊಲೀಸ್ ಸಿಬ್ಬಂದಿಯವರಾದ ಧರ್ಮರಾಜ, ಸುರೇಶ ಎ. ವಿನೋದಕುಮಾರ, ಅರುಣಕುಮಾರ ಬಿ. ಅಣ್ಣಪ್ಪ, ಶರತಕುಮಾರ, ಬಸವರಾಜ, ಶರಣಪ್ಪ ಆರೋಪಿತರನ್ನು ಹಿಡಿಯಲು ಯಶಸ್ವಿಯಾಗಿರುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss