ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೇರಳದ ಕರಾವಳಿಯಲ್ಲಿ 2012ರಲ್ಲಿ ಇಬ್ಬರು ಮೀನುಗಾರರನ್ನು ಕೊಂದ ಆರೋಪಕ್ಕೆ ಗುರಿಯಾಗಿದ್ದ ಇಟಲಿ ನೌಕಾಪಡೆಯ ಯೋಧರಾದ ಸಾಲ್ವಟೋರ್ ಜಿರೋನ್ ಮತ್ತು ಮಸ್ಸಿಮಿಲಿಯಾನೊ ಲಟ್ಟೊರೆ ವಿರುದ್ಧದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ಸಂತ್ರಸ್ತರ ಕುಟುಂಬಸ್ಥರಿಗೆ ಪರಿಹಾರ ವಿತರಿಸಲು ರೂ. 10 ಕೋಟಿ ಮೊತ್ತವನ್ನು ಇಟಲಿ ವರ್ಗಾಯಿಸಿದ್ದು, ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಖಾತೆಗೆ ಕಳೆದ ವಾರವೇ ಈ ಮೊತ್ತ ಜಮೆಯಾಗಿದೆ. ಈ ಕುರಿತಂತೆ ದೃಢೀಕರಣ ಹೇಳಿಕೆಯನ್ನು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ ಆರ್ ಶಾ ಅವರ ನೇತೃತ್ವದ ಪೀಠ ಪಡೆದುಕೊಂಡಿದೆ.
‘ನ್ಯಾಯಮಂಡಳಿಯ ಅದೇಶದಂತೆ ರೂ. 10 ಕೋಟಿ ಪರಿಹಾರಕ್ಕೆ ಭಾರತ ಒಪ್ಪಿಕೊಂಡಿದ್ದು, ಪರಿಹಾರದ ಹಣವನ್ನು ಈಗಾಗಲೇ ವರ್ಗಾಯಿಸಲಾಗಿದೆ. ಇಟಲಿ ಸರ್ಕಾರವು ಹಣವನ್ನು ಪಾವತಿಸಿದ್ದು, ಈ ಹಣವನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ವರ್ಗಾಯಿಸಲಾಗಿದೆ. ಪರಿಹಾರ ವಿತರಿಸಿರುವುದು ನಮಗೆ ಸಮಾಧಾನ ಉಂಟು ಮಾಡಿದೆ. ಹೀಗಾಗಿ, ಭಾರತ ಸಂವಿಧಾನದ 142ನೇ ವಿಧಿಯ ಅನ್ವಯ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ.
ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಖಾತೆಯಿಂದ ಈ ಮೊತ್ತವನ್ನು ಕೇರಳದ ಹೈಕೋರ್ಟ್ ರಿಜಿಸ್ಟ್ರಿಗೆ ವರ್ಗಾಯಿಸಲಾಗುವುದು. ಈ ಪೈಕಿ ತಲಾ 4 ಕೋಟಿ ರೂಪಾಯಿಗಳನ್ನು ಘಟನೆಯಲ್ಲಿ ಮೃತರಾದ ಇಬ್ಬರು ಸಂತ್ರಸ್ತರ ಕುಟುಂಬಸ್ಥರಿಗೆ ಮತ್ತು ಉಳಿದ ಎರಡು ಕೋಟಿ ರೂಪಾಯಿಯನ್ನು ಹಡಗಿನ ಮಾಲೀಕರಿಗೆ ಪಾವತಿಸಲಾಗುವುದುಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಇಟಲಿಯ ‘ಎನ್ರಿಕಾ ಲೆಕ್ಸಿ’ ಹಡಗಿನಲ್ಲಿದ್ದ ಜಿರೋನ್ ಮತ್ತು ಲಟ್ಟೊರೆ ಇವರಿಬ್ಬರು ಭಾರತದ ಮೀನುಗಾರರನ್ನು ಕಡಲ್ಗಳ್ಳರು ಎಂದು ಭಾವಿಸಿ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.