ಹೊಸದಿಗಂತ ವರದಿ ಹಾಸನ:
ಕಡಿಮೆ ಬಂಡವಾಳ ಹಾಗೂ ಕಡಿಮೆ ಜಾಗದಲ್ಲಿ ಹೆಚ್ಚು ಲಾಭ ಗಳಿಸುವ ಅವಕಾಶ ಅಣಬೆ ಬೇಸಾಯದಲ್ಲಿದೆ ಎಂದು ಕೃಷಿ ಸಂಪನ್ಮೂಲ ವ್ಯಕ್ತಿ ಪ್ರಜ್ವಲ್ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಜಿಲ್ಲೆಯ ಅರಸೀಕೆರೆ ತಾಲೂಕಿನ ಚಗಚಗೆರೆ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಹಾಸನದ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿರುವ ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದಲ್ಲಿ, ಅಣಬೆ ಬೇಸಾಯದ ಪದ್ಧತಿ ಪ್ರಾತ್ಯಕ್ಷಿಕೆಯಲ್ಲಿ ಅಣಬೆ ಬೇಸಾಯ ಕುರಿತು ರೈತರಿಗೆ ಮಾಹಿತಿ ನೀಡಿದರು.
ಅಣಬೆ ಬೇಸಾಯ ಮಾಡಿದರೆ ಕೇವಲ 38 ದಿನಗಳಲ್ಲಿ ಬೆಳೆ ಕೈ ಸೇರಲಿದೆ. ರಸಾಯನಿಕ ಗೊಬ್ಬರ ಬಳಸದೆ ಕೇವಲ ಸಾವಯವ
ಪದ್ಧತಿಯಲ್ಲಿ ಅಣಬೆ ಬೆಳೆಯುವ ಕಾರಣ ಉತ್ತಮ ಮಾರುಕಟ್ಟೆ ಸಿಗಲಿದೆ. ಮಾರುಕಟ್ಟೆಗೆ ದಾರಿ ಮಾಡಿಕೊಂಡರೆ ನಷ್ಟವಿಲ್ಲದೇ ಅಣಬೆ ಬೇಸಾಯ ಮಾಡಬಹುದಾಗಿದೆ. ಈ ಬೇಸಾಯ ಪದ್ಧತಿಯಲ್ಲಿ ಶ್ರಮಕ್ಕಿಂತ ವೈಜ್ಞಾನಿಕತೆಯ ಅವಶ್ಯಕತೆ ಇದೆ. ಸಾಧ್ಯವಾದಷ್ಟು ತಂಪಾದ ಕೊಟ್ಟಿಗೆ ಅಥವಾ ಕೋಣೆಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಬೇಸಾಯಕ್ಕೆ ಒಂದು ಸ್ಪನ್ ರನ್ನಿಂಗ್ ಕೋಣೆ, ಕ್ರಾಪಿಂಗ್ ಕೋಣೆ ಬೇಕಾಗುತ್ತದೆ. ಸಾಮಾನ್ಯವಾಗಿ ಭತ್ತದ ಹುಲಿನಲ್ಲಿ ಬಿತ್ತನೆ ಮಾಡಿದ ಬಳಿಕ 21 ದಿನ ಇಂಕ್ಯೂಬೇಶನ್ ಪಿರಿಯಡ್ ಇರುತ್ತದೆ. ಇದಕ್ಕೋಸ್ಕರ ಕತ್ತಲೆ ಕೋಣೆಯ ಅಗತ್ಯವಿರುತ್ತದೆ. 21 ದಿನಗಳ ಬಳಿಕ ಕ್ರಾಪಿಂಗ್ ರೂಂಗೆ ಬೆಳೆಯನ್ನು ವರ್ಗಾಯಿಸಲಾಗುತ್ತದೆ. ಕಡಿಮೆ ಮಾನವ ಸಂಪನ್ಮೂಲದಲ್ಲಿಯೇ ಮಾಡಬಹುದು ಎಂದು ಮಾಹಿತಿ ನೀಡಿದ ಅವರು, ಅಣಬೆ ಬೆಳೆಯ ವಿವಿಧ ತಳಿಗಳ ಬಗ್ಗೆ ಬೆಳೆದಂತಹ ಅಣಬೆಯ ಮಾರುಕಟ್ಟೆಯ ಬಗ್ಗೆ ತಿಳಿಸಿಕೊಟ್ಟರು.