Monday, July 4, 2022

Latest Posts

ಹಬ್ಬದ ಒಳಗೆ ಇತ್ಯರ್ಥವಾಗಬೇಕು..ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ: ಕೋಡಿಹಳ್ಳಿ ಚಂದ್ರಶೇಖರ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೈ ಎಲೆಕ್ಷನ್​ ಬಗ್ಗೆ ಚಿಂತಿಸುತ್ತಿರುವ ಸರ್ಕಾರಕ್ಕೆ ಸಾರಿಗೆ ನೌಕರರ ಸಮಸ್ಯೆಗಳು ಕಾಣುತ್ತಿಲ್ಲ. ಇಂತಹ ಸರ್ಕಾರ ಇರುವುದು ಈ ರಾಜ್ಯದ ಜನರ ದುರಂತ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಕಿಡಿಕಾರಿದ್ದಾರೆ.
ಸಾರಿಗೆ ನೌಕರರ ಕೂಟ ಹಾಗೂ ಇತರೆ ಟ್ರೇಡ್​ ಯೂನಿಯನ್​ಗಳ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರು ಯುಗಾದಿ ಹಬ್ಬ ಮಾಡೋ ಹಾಗಿಲ್ಲ, ಇದನ್ನು ಹೇಳಿದ್ರೆ ಎಸ್ಮಾ ಹಾಕ್ತೀನಿ ಎನ್ನುತ್ತದೆ ಸರ್ಕಾರ. ನಾಳೆ‌ ಸಾರಿಗೆ ನೌಕರರ ಕುಟುಂಬದವರಿಂದ ವಿಭಿನ್ನ ಚಳುವಳಿ ಮಾಡಿಸುತ್ತೇವೆ. ನೌಕರರ ಕಷ್ಟ ನಿಮಗೆ ಅರ್ಥ ಆಗ್ತಾಯಿಲ್ವಾ ಮಿನಿಸ್ಟರ್​‌ ಸವದಿ ಅವರೇ? ಹಬ್ಬದ ಒಳಗೆ ಇದನ್ನು ಇತ್ಯರ್ಥ ಮಾಡಬೇಕು. ಇಲ್ಲವಾದಲ್ಲಿ ನಮ್ಮ‌ ಮುಷ್ಕರ ಅನಿರ್ದಿಷ್ಟಾವಧಿ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಕೊಟ್ಟ ಮಾತು ಜಾರಿ ಮಾಡದೆ ತಪ್ಪು ಮಾಡುತ್ತಿದೆ. ಕಳೆದ ಮಾರ್ಚ್​ 16 ರಂದು ನೋಟೀಸ್​ ನೀಡಿದ್ದೆವು, ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿದ್ದೆವು. ಆದರೆ ಸರ್ಕಾರದ ಮಾತುಕತೆ ವಿಫಲವಾದ ಬಳಿಕ ನಾವು ಚಳವಳಿಗಳನ್ನ ಆರಂಭಿಸಿದ್ದೇವೆ. ಮುಖ್ಯಮಂತ್ರಿಗಳು, ಸಚಿವರುಗಳಾರೂ ನಮ್ಮನ್ನ ಮಾತುಕತೆಗೆ ಕರೆದಿಲ್ಲ. ಕಾರ್ಮಿಕ ಆಯುಕ್ತರು ಈ ಮುಷ್ಕರ ಮಾಡುತ್ತಿರುವುದು ಊರ್ಜಿತವಲ್ಲ ಎಂದು ಹೇಳುತ್ತಾರೆ. ಏಪ್ರಿಲ್ 7 ರಂದು ಈ ಮುಷ್ಕರ ಆರಂಭವಾಗಬೇಕಿತ್ತು, ಆದರೆ ಏಪ್ರಿಲ್​ 6 ಮಧ್ಯಾಹ್ನವೇ ಆರಂಭವಾಗಿದೆ ಎಂಬ ಕಾರಣ ಕೊಡ್ತಾರೆ. ಮುಷ್ಕರ ಆರಂಭವಾಗಿ ಈಗಾಗಲೇ 5 ದಿನಗಳು ಕಳೆದಿವೆ, 6 ನೇ ದಿನವೂ ನಮ್ಮ ಮುಷ್ಕರ ಮುಂದುವರೆಯುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಐಎನ್​ಟಿಯುಸಿ ಪ್ರಧಾನ ಕಾರ್ಯದರ್ಶಿ ಬೋರ್​ ಶೆಟ್ಟಿ, ನಾಗರಾಜ್​, ಕೆಬಿಎನ್​ಎನ್​ ಸಂಘಟನೆಗಳ ಪ್ರಧಾನ ಕಾರ್ಯದರ್ಶಿ ವಿಜಯ್​ ಕುಮಾರ್​, ಯುನೈಟೆಡ್​ ಎಂಪ್ಲಾಯಿಸ್​ ಯೂನಿಯನ್​ ಅಧ್ಯಕ್ಷ ಡಿಸೋಜಾ, ಕೆಎಸ್‌ಆರ್​ಟಿಸಿ, ಬಿಎಂಟಿಸಿ ಯುನೈಟೆಡ್​ ಎಂಪ್ಲಾಯಿಸ್​ ಅಸೋಸಿಯೇಷನ್​ನ ಹರಿಶ್​ ಪಿ ಗೌಡ, ನಾಲ್ಕು ನಿಗಮದ ಒಕ್ಕಲಿಗರ ಸಂಘದ ಅಧ್ಯಕ್ಷ ಮಹೇಶ್​, ಎಸ್​ಸಿ ಎಸ್​ಟಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್​ – ನಾಲ್ಕು ನಿಗಮದ ಕುರುಬರ ಸಂಘದ ರಾಜ್ಯಾಧ್ಯಕ್ಷರು ಭಾಗಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss