ಹೊಸ ದಿಗಂತ ವರದಿ, ಕೋಲಾರ:
ಸರ್ಕಾರಿ ನೌಕರರು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆಸದೇ ಶೀಘ್ರ ಕೆಲಸ ಮಾಡಿಕೊಡಿ, ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಸದಾ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದರು.
ನಗರದ ತಮ್ಮ ನಿವಾಸದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಅಭಿನಂದಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ನಾನು ವಾರದಲ್ಲಿ ಹೆಚ್ಚು ದಿನ ನಗರದಲ್ಲೇ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ, ಮತ ನೀಡಿರುವ ಜನರ ಹಿತ ಕಾಯುವುದು ನನ್ನ ಕೆಲಸವೂ ಆಗಿದೆ ಎಂದರು.
ಸರ್ಕಾರಿ ನೌಕರರು ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸದೇ ಕರ್ತವ್ಯ ನಿರ್ವಹಿಸಿ, ನಿಮ್ಮ ಸಮಸ್ಯೆಗಳಿಗೆ ಸದಾ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು.
ಕೋಲಾರ ಜಿಲ್ಲೆಯಲ್ಲಿ ನೌಕರರು ಜನತೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂಬ ಗೌರವವಿದೆ, ನಿಮ್ಮ ವೃತ್ತಿಧರ್ಮ ಪಾಲಿಸಿ, ಹಳ್ಳಿಗಳಿಂದ ಬರುವ ಜನರ ಸಮಸ್ಯೆಗಳಿಗೆ ಆದಷ್ಟು ಶೀಘ್ರ ಪರಿಹಾರ ನೀಡಿ ಎಂದು ಕಿವಿಮಾತು ಹೇಳಿ, ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌರವಾಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷ ಪುರುಷೋತ್ತಮ್, ಯುವಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್,ಎಂ.ನಾಗರಾಜ್, ರತ್ನಪ್ಪಮೇಲಾಂಗಣಿ, ಡಾ.ಇಂಚರನಾರಾಯಣಸ್ವಾಮಿ, ನೌಕರರ ಸಂಘದ ಅರುಣ್ಯ ಇಲಾಖೆ ಮಂಜು, ಸಂತೋಷ್,ಮುನಿರಾಜು,ಸೋಮಶೇಖರ್ ಮತ್ತಿತರರಿದ್ದರು.