“ಗೋಹತ್ಯೆಯಾದರೆ ಪರವಾಗಿಲ್ಲ ಎನ್ನುವ ಕಾಂಗ್ರೆಸ್ ನಂದಿನಿ ಉಳಿಸುವ ಮಾತನಾಡೋದು ಇಬ್ಬಂದಿತನ”

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತ್‌ನ ಅಮುಲ್‌ನೊಂದಿಗೆ ನಂದಿನಿ ವಿಲೀನಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪ ವ್ಯಕ್ತವಾಗಿದ್ದು, ಇದರ ಲಾಭ ಪಡೆಯಲು ಯತ್ನಿಸಿರುವ ವಿಪಕ್ಷಗಳಿಗೆ ಬಿಜೆಪಿ ತಿರುಗೇಟು ನೀಡಿದೆ. ನಂದಿನಿ ಉಳಿಸಿ ವಿಚಾರದಲ್ಲಿ ಕಾಂಗ್ರೆಸ್ ಆರೋಪ ಆಧಾರ ರಹಿತ ಮತ್ತು ಅವರದ್ದು ರೋಗಿಷ್ಠ ಮನಸ್ಥಿತಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಕಟುವಾಗಿ ಟೀಕಿಸಿದರು. ಏನೇ ಆದರೂ ದೇಶದಲ್ಲಿ ಅಮೂಲ್‍ಗೆ ಸ್ಪರ್ಧೆ ಒಡ್ಡುವ ಮಾದರಿಯಲ್ಲಿ ಕೆಎಂಎಫ್ (ನಂದಿನಿ) ಸಂಸ್ಥೆಯನ್ನು ಬೆಳೆಸುತ್ತೇವೆ ಎಂಬ ಭರವಸೆಯನ್ನೂ ಸಹ ನೀಡಿದರು.

ಗೋಹತ್ಯೆ ವಿರುದ್ಧ ಮತ ಹಾಕಿದವರು, ನಂದಿನಿ ಬಗ್ಗೆ ಮಾತನಾಡುತ್ತಿದ್ದಾರೆ

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ…ನಂದಿನಿ ಮುಳುಗಿಸುವ ಡಿಕೆಶಿ, ಸಿದ್ದರಾಮಯ್ಯ ಟೀಕೆಗೆ ಖಡಕ್ಕಾಗಿ ಉತ್ತರಿಸಿದ್ದು, ನಂದಿನಿ ಮಾತ್ರವಲ್ಲದೆ ರಾಜ್ಯದ ಹಸುಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಅದಕ್ಕೇ ಗೋಹತ್ಯಾ ನಿಷೇಧ ಮಾಡಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರದ್ದು ದ್ವಿಮುಖ ನೀತಿ. ಗೋಹತ್ಯೆಯಾದರೆ ಪರವಾಗಿಲ್ಲ ಎನ್ನುವ ಕಾಂಗ್ರೆಸ್ ನಂದಿನಿ ಉಳಿಸುವ ಬಗ್ಗೆ ಮಾತನಾಡುತ್ತಿರುವುದು ಇಬ್ಬಂದಿಕರವಾಗಿದೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ವಿರುದ್ಧ ಮತ ಹಾಕಿದವರು ಕಾಂಗ್ರೆಸ್‌ನವರೇ ಎಂದು ಆಕ್ರೋಶದಿಂದ ನುಡಿದರು. ನಂದಿನಿಯನ್ನು ದೇಶದ ದೊಡ್ಡ ಹೈನುಗಾರಿಕಾ ಸಂಸ್ಥೆಯಾಗಿ ಮಾಡುವುದಾಗಿ ಸವಾಲೆಸೆದರು. ವಿಶ್ವದಲ್ಲಿ ಭಾರತ ಮೊದಲು ಎಂಬ ತತ್ವ ನಮ್ಮದು. ಆದರೆ, ಭಾರತದಲ್ಲಿ ಕಾಂಗ್ರೆಸ್ ಮೊದಲು, ಕಾಂಗ್ರೆಸ್‍ನಲ್ಲಿ ಸೋನಿಯಾ- ರಾಹುಲ್ ಗಾಂಧಿ ಮೊದಲು ಎನ್ನುವ ಚಿಂತನೆ ಕಾಂಗ್ರೆಸ್ಸಿಗರು. ಜೆಡಿಎಸ್‌ನವರದ್ದು ಕುಟುಂಬ ಮೊದಲು ಎಂಬ ನೀತಿ ಹೊಂದಿದ್ದಾರೆ.

ಪ್ರಾಣಿಹತ್ಯೆ ಮಾಡುವವರು ನಾವಲ್ಲ. ಮನುಷ್ಯರು, ಪ್ರಾಣಿಗಳ ರಕ್ಷಣೆ ಜವಾಬ್ದಾರಿ ನಮ್ಮದು. ಇದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಲಿ ಎಂದು ಆಗ್ರಹಿಸಿದರು. ನೆರೆ ಬಂದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೆತ್ತಿಕೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ ರವಿಕುಮಾರ್, ನೊಣಗಳ ಥರ ಸದಾ ಕೆಟ್ಟ ವಿಚಾರದ ಬಗ್ಗೆ ಚಿಂತಿಸದಿರಿ ಎಂದು ವಿಪಕ್ಷಗಳಿಗೆ ಕಿವಿಮಾತನ್ನು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!