ಹೊಸದಿಗಂತ ವರದಿ,ತುಮಕೂರು:
ಶ್ರೀ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ವತಿಯಿಂದ ಕೊಡಮಾಡುವ 2024ನೇ ಸಾಲಿನ ಪ್ರತಿಷ್ಠಿತ ‘ಸಿದ್ಧಗಂಗಾಶ್ರೀ’ ಪ್ರಶಸ್ತಿಗೆ ನಾಡಿನ ಹಿರಿಯ ಜಾನಪದ ವಿದ್ವಾಂಸರಾದ ಡಾ. ಗೊ.ರು. ಚನ್ನಬಸಪ್ಪನವರಿಗೆ ನೀಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಹೆಚ್. ಶಿವರುದ್ರಯ್ಯನವರು ತಿಳಿಸಿದ್ದಾರೆ.
ಶರಣ ಸಾಹಿತ್ಯ ವಿದ್ವಾಂಸ, ಕನ್ನಡ ಸಾಹಿತ್ಯ ಸೇವಾರತ್ನ, ನಾಡೋಡ ಪ್ರಶಸ್ತಿ ಪುರಸ್ಕೃತ, ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಮಂಡ್ಯದಲ್ಲಿ ಜರುಗಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಕನ್ನಡ ಸಾಹಿತ್ಯದ ಶ್ರೀಮಂತ ಕೃಷಿಕರು ಹಾಗೂ ಶಿಕ್ಷಣ ಪ್ರೇಮಿ ಹೀಗೆ ನಾನಾ ಪ್ರಕಾರಗಳಲ್ಲಿ ಜೀವಮಾನದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಹೆಚ್. ಶಿವರುದ್ರಯ್ಯ ತಿಳಿಸಿರುತ್ತಾರೆ.
ಜನವರಿ 21ರಂದು ಡಾ. ಶ್ರೀ ಶಿವಕುಮಾರಮಹಾಸ್ವಾಮಿಗಳವರ 6ನೇ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 1 ಲಕ್ಷ ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.