ಪಠ್ಯದಲ್ಲಿ ಭಗವದ್ಗೀತೆ ಕಲಿಸುವ ಚಿಂತನೆ ಸ್ವಾಗತಾರ್ಹ: ನಳಿನ್‍ ಕುಮಾರ್ ಕಟೀಲ್

ಹೊಸದಿಗಂತ ವರದಿ ಬೆಂಗಳೂರು
ಪಠ್ಯಗಳಲ್ಲಿ ಭಗವದ್ಗೀತೆ ಕಲಿಸುವ ಚಿಂತನೆ ಸ್ವಾಗತಾರ್ಹ‌ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಿಕ್ಷಣ ಎಂದರೆ ಅದು ಮನುಷ್ಯನ ಸುಪ್ತ ಸಾಮಥ್ರ್ಯದ ಅಭಿವ್ಯಕ್ತಿಗೊಳಿಸುವ ಪ್ರಕ್ರಿಯೆ. ಇಂದಿನ ಶಿಕ್ಷಣದಲ್ಲಿ ಕೇವಲ ಮೆದುಳಿಗೆ ಮಾಹಿತಿ ಕೊಡಲಾಗುತ್ತಿದೆ. ಶಿಕ್ಷಣವು ಮನುಷ್ಯನೊಳಗಿನ ವ್ಯಕ್ತಿತ್ವಕ್ಕೆ ಹೊಳಪು ಮತ್ತು ಬೆಳಕು ಕೊಡುವ ಮಾದರಿಯಲ್ಲಿರಬೇಕು‌ ಎಂದು ಹೇಳಿದರು.
ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ತರಗತಿಗಳಲ್ಲಿ ಭಗವದ್ಗೀತೆಯ ಶಿಕ್ಷಣ ನೀಡಬೇಕಿದೆ. ಅಂಥ ಬೆಳಕಿನಿಂದ ಸತ್ಪ್ರಜೆಯ ನಿರ್ಮಾಣ ಸಾಧ್ಯ. ಅಂಥ ವ್ಯಕ್ತಿ ರಾಷ್ಟ್ರಕ್ಕೆ ಆಸ್ತಿ ಆಗುತ್ತಾನೆ. ವಿದ್ಯಾರ್ಥಿಯ ಸರ್ವತೋಮುಖ ವಿಕಾಸದ ಬದಲಾಗಿ ಇಂದು ಆತನ ತಲೆಗೆ ಏನೇನೋ ತುರುಕುವ ಕೆಲಸ ನಡೆದಿದೆ. ಮನುಷ್ಯನ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ನಮ್ಮ ಪ್ರಾಚೀನ ಚಿಂತನೆ, ವಿಚಾರಧಾರೆಯನ್ನು ತಿಳಿಸುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಜನೆ “ನಹಿ ಜ್ಞಾನೇನ ಸದೃಶಂ” ಎಂಬಂತೆ ದೇಶ ಮತ್ತು ಜಗತ್ತಿನ ಒಳಿತಿಗೆ ಬಳಕೆ ಆಗಬೇಕೆಂಬುದನ್ನು ಹೇಳಿಕೊಡಬೇಕು. ಸ್ವಂತ ಬೆಳವಣಿಗೆ ಮಾತ್ರವಲ್ಲದೆ ಸಮಾಜದ ಒಳಿತಿಗಾಗಿ ಕಲಿತ ವಿದ್ಯೆ ಬಳಕೆ ಆಗಬೇಕು. ಭಗವದ್ಗೀತೆಯು ಭಾರತ ದೇಶದ ಅಂತಃಸತ್ವ. ಹಿಂದೆ ಶಿಕ್ಷಣ ಸಚಿವರಾಗಿದ್ದ ಎಂ.ಸಿ. ಚಾಗ್ಲಾ ಅವರು ನೈತಿಕ ಶಿಕ್ಷಣವನ್ನು ಕೊಡುವ ಕುರಿತು ಪ್ರತಿಪಾದಿಸಿದ್ದರು. ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ವಿಚಾರಧಾರೆಯನ್ನು ತಿಳಿಸಲು ಅವರು ತಿಳಿಸಿದ್ದರು ಎಂದು ನಳಿನ್ ವಿವರಿಸಿದರು.
ಭಗವದ್ಗೀತೆಯನ್ನು ವಿದೇಶಗಳಲ್ಲೂ ಇಷ್ಟಪಟ್ಟು ಕಲಿಸುತ್ತಿದ್ದಾರೆ. ಮನುಷ್ಯ ಮನುಷ್ಯತ್ವದೊಂದಿಗೆ ಬದುಕಬೇಕು ಎಂಬುದನ್ನು ತಿಳಿಸುವ ಕಾರ್ಯವನ್ನು ಭಗವದ್ಗೀತೆ ಮಾಡುತ್ತದೆ. ಇವತ್ತಿನ ಕ್ರೌರ್ಯ, ಹಿಂಸೆ, ಅಪರಾಧ ಪ್ರವೃತ್ತಿ ಹೆಚ್ಚಳದ ಈ ಕಾಲಘಟ್ಟದಲ್ಲಿ ಭಗವದ್ಗೀತೆಯ ಅಗತ್ಯ ಹೆಚ್ಚಾಗಿದೆ ಎಂದಿದ್ದಾರೆ.
ಹಿಂದೊಮ್ಮೆ ಅಮೆರಿಕದ ಷಿಕಾಗೊದಲ್ಲಿ ಭಗವದ್ಗೀತೆಯ ಮೇಲ್ಗಡೆ ಕುರಾನ್, ಅದರ ಮೇಲೆ ಬೈಬಲ್ ಇತ್ತು. ಆಗ ವಿವೇಕಾನಂದರನ್ನು ಈ ಕುರಿತು ಅಲ್ಲಿನ ಪ್ರಜೆಯೊಬ್ಬರು ಗಮನ ಸೆಳೆದು ಭಗವದ್ಗೀತೆ ಕೆಳಗಿದೆ ಎಂದಾಗ “ಭಗವದ್ಗೀತೆಯು ಎಲ್ಲ ವಿಚಾರಗಳ ಬೇರು, ತಳಹದಿ” ಎಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದರು. ಅದೇ ಮಾದರಿಯಲ್ಲಿ ಭಗವದ್ಗೀತೆ ಕಲಿಕೆಯು ನೈತಿಕತೆಯ ತಳಹದಿ ಆಗಬಲ್ಲದು ಎಂದು ತಿಳಿಸಿದ್ದಾರೆ.
ಭಗವದ್ಗೀತೆಯು ದೇಶದ ಸಂಸ್ಕøತಿಯ ಭಾಗವಾಗಿದೆ. ಮತಬ್ಯಾಂಕ್ ರಾಜಕಾರಣ, ಓಲೈಕೆಯ ರಾಜಕೀಯ ಮಾಡುವವರಿಗೆ ದೇಶದ ಇಂಥ ಗಟ್ಟಿ ಬೇರುಗಳ ಅರಿವಿಲ್ಲ. ಗಾಂಧೀಜಿ ಅವರು ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಭಗವದ್ಗೀತೆಯನ್ನು ದೇಶದಾದ್ಯಂತ ಪ್ರಸಾರ ಆಗಬೇಕೆಂದು ಪ್ರಯತ್ನ ಮಾಡಿದ್ದರು. ಭಗವದ್ಗೀತೆ ಓದುವವರು ದೇಶದ ಆಸ್ತಿಯಾಗುತ್ತಾರೆ. ಅವರು ದೇಶಕ್ಕೆಂದೂ ಹೊರೆ ಅನಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲೂ ಭಗವದ್ಗೀತೆಯನ್ನು ಮುಟ್ಟಿ ಸತ್ಯವನ್ನೇ ಹೇಳುವುದಾಗಿ ಪ್ರಮಾಣ ಮಾಡುವ ಪದ್ಧತಿಯಿದೆ. ಭಗವದ್ಗೀತೆ ಎಂದಾಗ ದೇಶದೊಳಗೆ ವ್ಯಕ್ತಿಯಲ್ಲಿ ರೋಮಾಂಚನ ಆಗಿ ಸುಳ್ಳು ಹೇಳುವವನೂ ಸತ್ಯ ಹೇಳುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಸ್ವಾಮಿ ವಿವೇಕಾನಂದರು ಮನುಷ್ಯ ನಿರ್ಮಾಣದ ಶಿಕ್ಷಣ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಅದಕ್ಕೆ ಅನುಗುಣವಾಗಿ ಮೂಲ ಶಿಕ್ಷಣದಲ್ಲಿ ಭಗವದ್ಗೀತೆಯ ಶಿಕ್ಷಣ ಅತ್ಯಗತ್ಯ ಎಂದು ನಳಿನ್‍ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!