ಕೆಂಪೇಗೌಡರ ಆಶಯ ಈಡೇರಿಸುತ್ತಿರುವ ಮೋದಿ: ನಳಿನ್‍ಕುಮಾರ್ ಕಟೀಲ್ ಮೆಚ್ಚುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು:
ಬೆಂಗಳೂರು ಇಂದು ಜಗತ್ತಿನ ಅತ್ಯುತ್ತಮ ನಗರಗಳಲ್ಲಿ ಒಂದಾಗಿದೆ. ಜಗತ್ತು ಬೆಂಗಳೂರನ್ನು ಗುರುತಿಸಲು ಅಗತ್ಯವಾದ ಪರಿಕಲ್ಪನೆಯನ್ನು ಕೆಂಪೇಗೌಡರು ನೀಡಿದ್ದಾರೆ. ಅವರೊಬ್ಬ ಪ್ರಜಾಪ್ರಭುತ್ವದ ಆಶಯದಲ್ಲಿ ಆಡಳಿತ ನಡೆಸಿದ ಅತ್ಯುತ್ತಮ ಆಡಳಿತಗಾರ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶ್ಲಾಘಿಸಿದರು.
ಮಹಾನಗರ ಪಾಲಿಕೆಯು ಸೋಮವಾರ ʼಬೆಂಗಳೂರು ನಿರ್ಮಾತೃ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿʼ ಆಚರಣೆಯನ್ನು ಬೆಂಗಳೂರು ನಗರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ನಳೀನ್‌ ಕಟೀಲ್‌ ಮಾತನಾಡಿದರು.
ಕೆಂಪೇಗೌಡ ಅವರಲ್ಲಿ ಸಾಮಾಜಿಕ ನ್ಯಾಯದ ಚಿಂತನೆಯಿತ್ತು. ಕುಡಿಯುವ ನೀರಿಗೆ ಆದ್ಯತೆ ನೀಡಿ ಹತ್ತಾರು ಕೆರೆಗಳನ್ನು ನಿರ್ಮಿಸಿದ್ದರು. ಹಲವಾರು ದೇವಸ್ಥಾನಗಳ ಪುನರ್ ನಿರ್ಮಾಣ ಮತ್ತು ಜೀರ್ಣೋದ್ಧಾರ ನಡೆಸುವ ಮೂಲಕ ಬೆಂಗಳೂರು ನಗರವನ್ನು ಸಾಂಸ್ಕಂತಿಕ ನಗರವನ್ನಾಗಿ ಅವರು ಪರಿವರ್ತಿಸಿದರು ಎಂದು ಹೇಳಿದರು.
ನಗರೋತ್ಥಾನ ಮಾಡುವ ಮೂಲಕ ನರೇಂದ್ರ ಮೋದಿಯವರು ಕೆಂಪೇಗೌಡರ ಕನಸುಗಳನ್ನು ನನಸು ಮಾಡುತ್ತಿದ್ದಾರೆ. ಮನೆಮನೆಗೆ ಗಂಗೆ ಕೊಡುವ ಯೋಜನೆಯನ್ನು ಮೋದಿಯವರು ಈಡೇರಿಸುತ್ತಿದ್ದಾರೆ ಎಂದು ವಿವರಿಸಿದರು. ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಭವ್ಯ ಕಾಶಿ, ದಿವ್ಯ ಕಾಶಿ ಯೋಜನೆಯನ್ನೂ ಅನುಷ್ಠಾನಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
ಕೆಂಪೇಗೌಡರ ನೆನಪನ್ನು ಶಾಶ್ವತವಾಗಿ ಇಡಲು ವಿಧಾನಸೌಧದ ಆವರಣದಲ್ಲಿ ವಿಗ್ರಹ ನಿರ್ಮಾಣದ ಘೋಷಣೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಳಿನ್‍ಕುಮಾರ್ ಕಟೀಲ್ ಅಭಿನಂದಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜು ಗೌಡ, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಬಿ.ನಾರಾಯಣ್, ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!