ಶ್ರೀರಂಗನಾಥನೂರಿಗೆ ಟಿಪ್ಪು ಹೆಸರು ನಾಮಕರಣ: ಲೇಖಕಿ ಬಿ.ಟಿ. ಲಲಿತಾನಾಯಕ್ ಹೇಳಿಕೆಗೆ ಬಿಜೆಪಿ ಖಂಡನೆ

ಹೊಸದಿಗಂತ ವರದಿ ಮಂಡ್ಯ :
ಶ್ರೀರಂಗನಾಥನೂರಿಗೆ ಮತಾಂಧ ಟಿಪ್ಪು ಸುಲ್ತಾನ್ ನಾಮಕರಣ ಮಾಡುಂತೆ ಹೇಳಿರುವ ಲೇಖಕಿ ಬಿ.ಟಿ. ಲಲಿತಾ ನಾಯಕ್ ಹೇಳಿಕೆಯನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಶ್ರೀರಂಗಟ್ಟಣದಲ್ಲಿ ಟಿಪ್ಪು ಆಳ್ವಿಕೆಯ ಕಾಲಘಟ್ಟದಲ್ಲಿ ಮತಾಂಧ ಟಿಪ್ಪು ಹಿಂದೂಗಳನ್ನು ಸಾಕಷ್ಟು ನೋಯಿಸಿದ್ದಾನೆ. ಹತ್ತು ಹಲವು ದೇವಾಲಯಗಳನ್ನು ಧ್ವಂಸ ಮಾಡಿ ಲೂಟಿ ಮಾಡಿದ್ದಾನೆ. ಹಿಂದೂ ಮಹಿಳೆಯರನ್ನು ಕೊಂದು ಹಾಕಿದ್ದಾನೆ ಅಷ್ಟೇ ಅಲ್ಲದೆ ಸುಂದರವಾಗಿದ್ದ ಹೆಣ್ಣು ಮಕ್ಕಳನ್ನು ಹೊತ್ತೊಯ್ದು ಆತನ ಜನಾನಾದಲ್ಲಿ ಬಂಧಿಯಾಗಿಟ್ಟು ಸಾಕಷ್ಟು ಚಿತ್ರಹಿಂಸೆ ನೀಡಿದ್ದಾನೆ. ಅವನ ಆಳ್ವಿಕೆಯಲ್ಲಿ ಕರ್ನಾಟಕದ ಬಹುತೇಕ ಊರುಗಳ ಹೆಸರುಗಳನ್ನು ಪರ್ಶಿಯನ್ ಹೆಸರುಗಳಿಗೆ ಬದಲಾಯಿಸಿದ್ದಾನೆ. ಉದಾಹರಣೆಗೆ ಮಡಿಕೇರಿ-ಜರಾಬಾದ್, ಹಾಸನ-ಖಾಯಿಮಾಬಾದ್, ಮಂಗಳೂರು-ಜಲಾಲಬಾದ್, ಮೈಸೂರು ನಜರಾಬಾದ್, ಅದಲ್ಲದೆ, ಟಿಪ್ಪುವಿನ ಆಡಳಿತದಲ್ಲಿ ಬಹುತೇಕ ಆಡಳಿತ ಕನ್ನಡ ಭಾಷೆಯನ್ನು ತೆಗೆದು ಪರ್ಶಿಯನ್ ಪದಗಳನ್ನು ಹಾಕಿದ್ದಾನೆ ಇಂತಹ ಮತಾಂಧನ ಹೆಸರನ್ನು ಶ್ರೀರಂಗನ ಊರಿಗೆ ಇಡುವುದು ಎಷ್ಟು ಸರಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಪ್ರಶ್ನಿಸಿದ್ದಾರೆ.
ಪೌತಿ ಖಾತೆ, ಬಗರ್ ಹುಕ್ಕುಂ ಆಖೈರು, ಅಫೀಲು, ಮೊಕ್ಕಾಂ, ಠಿಕಾಣಿ ಹೀಗೆ ನೂರಾರು ಪದಗಳನ್ನು ಆಡಳಿತ ಕನ್ನಡದಲ್ಲಿ ಬಲವಂತವಾಗಿ ಹೇರಿದ್ದ. ಅವು ಇಂದಿಗೂ ಹಾಗೆಯೇ ಜೀವಂತವಾಗಿವೆ. ಈ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಕನ್ನಡ ನಾಡಿನಲ್ಲೇ ಹುಟ್ಟಿ ಬೆಳೆದು, ಇಲ್ಲಿನ ಮಣ್ಣು ಹೊನ್ನು ಬಳಸಿಕೊಂಡು ಬೆಳೆದಿರುವ ನಾವು ಪರ್ಶಿಯನ್ ಭಾಷೆಯನ್ನು ಬಲವಂತವಾಗಿ ಹೇರಿದ ಟಿಪ್ಪುವನ್ನು ಬೆಂಬಲಿಸುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ನಿಜವಾಗಲೂ ಬಿ.ಟಿ. ಲಲಿತಾ ನಾಯಕ್ ಅವರಿಗೆ ಕನ್ನಡ ಮತ್ತು ಕನ್ನಡಿಗರ ಬಗ್ಗೆ ಅಭಿಮಾನ ಇದ್ದರೆ ಟಿಪ್ಪುವಿನ ಖಡ್ಗದ ಮೇಲೆ ಬರೆದಿರುವ ಹಿಂದೂ ವಿರೋಧಿ ಘೋಷವಾಕ್ಯವನ್ನು ಬಹಿರಂಗಪಡಿಸಲಿ, ರಾಜ್ಯ ಉಚ್ಚ ನ್ಯಾಯಾಲಯ ಟಿಪ್ಪು ತನ್ನ ಸ್ವ ಹಿತಕ್ಕಾಗಿ ಯುದ್ಧ ಮಾಡಿದ್ದಾನೆಯೇ ಹೊರತು, ಆತ ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ಅಭಿಪ್ರಾಯಪಟ್ಟಿದೆ. ಟಿಪ್ಪು ಜಯಂತಿ ಮಾಡುವುದರ ಬಗ್ಗೆಯೂ ಪ್ರಶ್ನಿಸಿದೆ. ಹೀಗಿರುವಾಗ ಕರ್ನಾಟಕವನ್ನು ಆಳಿದ ವಿಜಯನಗರದ ಅರಸರು, ಹೊಯ್ಸಳರು ಸೇರಿದಂತೆ ಮಹನೀಯರು ಕಟ್ಟಿದ ಶ್ರೀರಂಗಪಟ್ಟಣ ಹಾಗೂ ಹಲವಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀರಂಗನಾಥನ ಪಟ್ಟಣಕ್ಕೆ ಟಿಪ್ಪು ಹೆಸರು ಇಡಬೇಕೆಂದು ಹೇಳುವುದನ್ನು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೇ ಎಂಬುದನ್ನು ಕೇಳಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಶ್ರೀರಂಗಪಟ್ಟಣಕ್ಕೆ ಟಿಪ್ಪುವಿನ ಹೆಸರನ್ನಿಡುವ ಮಾತಿರಲಿ, ಪಟ್ಟಣದ ತೊಂಬೆ ನಲ್ಲಿಗೂ ಟಿಪ್ಪುವಿನ ಹೆಸರು ಇಡುವಂತಹ ಯೋಗ್ಯತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!