ಇನ್ನು 15 ದಿನದಲ್ಲಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಕಾರ್ಯಾರಂಭ: ಸಚಿವ ಎಸ್.ಟಿ.ಸೋಮಶೇಖರ್

ಹೊಸದಿಗಂತ ವರದಿ,ಮೈಸೂರು:

ಇನ್ನು 15 ದಿನಗಳಲ್ಲಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮಂಗಳವಾರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಪಿರಿಯಾಪಟ್ಟಣ ತಾಲೂಕಿನ ನೂತನ ಉಪ ಕಚೇರಿಯ ಕಟ್ಟಡ ಮತ್ತು ರಾಸು ಮೇಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೈನುಗಾರಿಕೆ ಮಾಡುವವರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಮುಖ್ಯಮಂತ್ರಿಗಳು ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಅವರು ಈಗಾಗಲೇ ಲೋಗೋ ಉದ್ಘಾಟನೆ ಮಾಡಿದ್ದಾರೆ. ಇನ್ನು ಹತ್ತು ಹದಿನೈದು ದಿನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಅನುಮತಿಯೊಂದಿಗೆ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ನಂದಿನಿ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕುಗಳು ಪ್ರತ್ಯೇಕವಾಗಿ, ಡಿಸಿಸಿ ಬ್ಯಾಂಕ್ ಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ. ಇವೆರಡನ್ನೂ ವಿಲೀನ ಮಾಡುವ ಪ್ರಮೇಯವೇ ಇಲ್ಲ ಎಂದರು.
ಜಿಲ್ಲೆಗಳ ಪ್ರವಾಸ ಮಾಡಿದಂತಹ ಸಂದರ್ಭದಲ್ಲಿ ಸಹಕಾರಿಗಳು ಯಶಸ್ವಿನಿ ಯೋಜನೆ ಜಾರಿ ಮಾಡುವಂತೆ ಬೇಡಿಕೆಯಿಡುತ್ತಿದ್ದರು. 2-3 ವರ್ಷದಿಂದ ಯಶಸ್ವಿನಿ ಜಾರಿಗೆ ಪ್ರಯತ್ನಿಸಲಾಯಿತು. ಇದೀಗ ಈ ಯೋಜನೆ ಮರುಜಾರಿ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದರು.
ಕೇAದ್ರ ಸಚಿವ ಅಮಿತ್ ಶಾ ಅವರು ಯಶಸ್ವಿನಿ ಯೋಜನೆ ಉದ್ಘಾಟಿಸಿದ್ದಾರೆ. ರೈತರ ಹಿತದೃಷ್ಟಿಯನ್ನು ಇಟ್ಟುಕೊಂಡು ಆಸ್ಪತ್ರೆಗೆ ದಾಖಲಾದಾಗ ಯಾವುದೇ ತೊಂದರೆ ಆಗದಂತೆ ಯಶಸ್ವಿನಿ ಯೋಜನೆಗೆ ಇನ್ನು 15-20 ದಿನದಲ್ಲಿ ಚಾಲನೆ ಸಿಗಲಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಗಳಿಗೆ 20810 ಕೋಟಿ ರೂ. ಸಾಲ ವಿತರಣೆ ಗುರಿ ನೀಡಿದ್ದು ಇದರಲ್ಲಿ 114% ಗುರಿ ಸಾಧಿಸಿವೆ. ಈ ವರ್ಷ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದೆ. ಇದರಲ್ಲಿ 3 ಲಕ್ಷ ಹೊಸ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗಲಿದೆ ಎಂದು ಹೇಳಿದರು.
ಪ್ರತಿ ವರ್ಷ ರೈತರಿಗೆ ಹೆಚ್ಚು ಸಾಲ ನೀಡುವ ಮೂಲಕ ಅವರ ಆದಾಯ ದುಪ್ಪಟ್ಟು ಆಗಬೇಕು ಎಂಬ ಆಶಯ ಹೊಂದಲಾಗಿದೆ. ಸಾಲ ವಿತರಣೆ ಮಾಡುವುದರ ಜೊತೆಗೆ ಸಾಲ ವಸೂಲಿ ಪ್ರಮಾಣ ಕೂಡ 90 ರಿಂದ 99% ನಷ್ಟಿರುವುದು ಖುಷಿ ತಂದಿದೆ ಎಂದರು.
ಮೈಸೂರು ಭಾಗದಲ್ಲಿ ರಾಗಿ ಹೆಚ್ಚಾಗಿ ಬೆಳೆದಿರುವುದರಿಂದ ರಾಗಿ ಖರೀದಿ ಕೇಂದ್ರಗಳನ್ನು ಮತ್ತೆ ಪ್ರಾರಂಭ ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಯಿತು. ಕೂಡಲೇ ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ರಾಗಿ ಖರೀದಿ ಕೇಂದ್ರ ಆರಂಭಕ್ಕೆ ಘೋಷಿಸಿದರು ಎಂದು ತಿಳಿಸಿದರು.
ಬಿತ್ತನೆಬೀಜ, ರಸಗೊಬ್ಬರದ ಅವಶ್ಯಕತೆ ಕುರಿತು ಚರ್ಚಿಸಲು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಎರಡು ದಿನ ಮೈಸೂರಿನಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಈ ವೇಳೆ ಗೊಬ್ಬರ ಸಮಸ್ಯೆ ಕುರಿತು ಚರ್ಚೆ ಮಾಡಿ ಸಮಸ್ಯೆ ಇತ್ಯರ್ಥಪಡಿಸಲಿದ್ದಾರೆ ಎಂದರು.
ಪಿರಿಯಾಪಟ್ಟಣ ಭಾಗದಲ್ಲಿ ಕೆರೆ ತುಂಬಿಸುವ ಕೆಲಸಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈಗಾಗಲೇ 70% ನೀರು ತುಂಬಿಸಿದ್ದು ಉಳಿಕೆ ಭಾಗದಲ್ಲಿ ನೀರು ತುಂಬಿಸುವುದಕ್ಕೆ ಇರುವ ಅಡೆತಡೆಗಳ ಬಗ್ಗೆ ಚರ್ಚಿಸಿ ಪರಿಹರಿಸಲಾಗುವುದು. ಈ ಭಾಗದಲ್ಲಿ ಪಶು ಆಹಾರ ಉತ್ಪಾದನೆ ಘಟಕ ಆರಂಭಕ್ಕೆ 10 ಎಕರೆ ಜಾಗ ಖರೀದಿಗೆ ಆದೇಶಿಸಲಾಗಿದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗುವುದರ ಜೊತೆಗೆ ಯುವಕರಿಗೆ ಉದ್ಯೋಗ ಕೂಡ ಸಿಗಲಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಬೇಧ ಮಾಡಿಲ್ಲ. ಕಾಂಗ್ರೆಸ್ ಶಾಸಕರಿರಲಿ, ಜೆಡಿಎಸ್ ಇರಲಿ, ಎಲ್ಲಾ ರೀತಿಯ ಬೆಂಬಲ ಕೊಟ್ಟಿದೆ. ಮೈಸೂರು ಉಸ್ತುವಾರಿ ಸಚಿವರಾಗಿ ಪಿರಿಯಾಪಟ್ಟಣ ಕ್ಷೇತ್ರದ ಅಭಿವೃದ್ಧಿಗೂ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಸು ಮೇಳ ಉದ್ಘಾಟನೆ ಮಾಡಲಾಯಿತು. ಜೊತೆಗೆ ಅತಿ ಹೆಚ್ಚು ಹಾಲು ನೀಡುವ ರಾಸುಗಳ ಮಾಲೀಕರಿಗೆ ಬಹುಮಾನ ಕೂಡ ವಿತರಣೆ ಮಾಡಲಾಯಿತು.
ಇದಕ್ಕೂ ಮುನ್ನ ಪಿರಿಯಾಪಟ್ಟಣ ತಾಲೂಕು ಮಟ್ಟದ ಆರೋಗ್ಯ ಮೇಳ ಹಾಗೂ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಜಿ.ಟಿ.ದೇವೇಗೌಡ, ಮಹದೇವ್, ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರಸನ್ನ ಸೇರಿದಂತೆ ಒಕ್ಕೂಟದ ನಿರ್ದೇಶಕರು, ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!