Friday, July 1, 2022

Latest Posts

ನರೇಗಾ ಯೋಜನೆ ಸ್ವಾಭಿಮಾನದ ಬದುಕು ಕಲಿಸಿಕೊಟ್ಟಿದೆ: ಸಚಿವ ಕೆ.ಎಸ್.ಈಶ್ವರಪ್ಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸ ದಿಗಂತ ವರದಿ, ದಾವಣಗೆರೆ:

ಕೋವಿಡ್ ಸಂಕಷ್ಟ ಕಾಲದಲ್ಲಿ ಗ್ರಾಮಗಳಿಗೆ ಮರಳಿದ ಯುವಕರಿಗೆ ಸ್ಥಳೀಯವಾಗಿ ಕೆಲಸ ನೀಡುವ ಮೂಲಕ ನರೇಗಾ ಯೋಜನೆ ಸ್ವಾಭಿಮಾನದ ಬದುಕು ಕಲಿಸಿಕೊಟ್ಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಓಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಕೋವಿಡ್ ಲಾಕ್‌ಡೌನ್ ಪರಿಣಾಮವಾಗಿ ನಗರಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಅನೇಕರು ಗ್ರಾಮಗಳಿಗೆ ಮರಳಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿರುವ ನಿದರ್ಶನವಿದೆ. ಕಳೆದ ವರ್ಷ ನರೇಗಾದಡಿ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿತ್ತು. ಆದರೆ ಕಳೆದ ಡಿಸೆಂಬರ್‌ನಲ್ಲಿಯೇ ಗುರಿ ಮೀರಿ ಸಾಧನೆ ಮಾಡಲಾಯಿತು. ಹೀಗಾಗಿ ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ಶಹಬ್ಬಾಶ್‌ಗಿರಿ ನೀಡಿ, ಇನ್ನೂ 2 ಕೋಟಿ ಹೆಚ್ಚುವರಿ ಮಾನವ ದಿನಗಳ ಸೃಜನೆಗೆ ಅವಕಾಶ ನೀಡಿ, 800 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದೆ. ಹೀಗಾಗಿ ನರೇಗಾ ಯೋಜನೆಯು ಗ್ರಾಮೀಣರಿಗೆ ಆರ್ಥಿಕ ಸಬಲತೆ ಜೊತೆಗೆ ಸ್ವಾಭಿಮಾನದ ಬದುಕನ್ನೂ
ನೀಡಿದೆ ಎಂದರು.
ನರೇಗಾ ಯೋಜನೆಯಡಿ ಶಾಲಾ ಕಾಂಪೌಂಡ್, ತೋಟಗಾರಿಕೆ ವಿಸ್ತರಣೆ, ಕೃಷಿ ಜಮೀನುಗಳಲ್ಲಿ ಕೆಲಸ, ಕೆರೆ, ಕಲ್ಯಾಣಿ ಮುಂತಾದ ಪ್ರದೇಶಗಳ ಹೂಳೆತ್ತಿ ಅಭಿವೃದ್ಧಿಪಡಿಸುವುದೂ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಅವಕಾಶವಿದೆ. ಗ್ರಾಮ ಪಂಚಾಯಿತಿಗಳ ನೇತೃತ್ವ
ವಹಿಸಿರುವ ಅಧ್ಯಕ್ಷರು, ಉಪಾಧ್ಯಕ್ಷರು ಸರ್ಕಾರದ ಯೋಜನೆಗಳ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು. ಗ್ರಾಮಗಳಲ್ಲಿ ಯಾವುದೇ ಕುಟುಂಬ ಶೌಚಾಲಯ ರಹಿತವಾಗಿರಬಾರದು. ಯಾರೂ ಕೂಡ ರಸ್ತೆಗಳ ಬದಿಯಲ್ಲಿ ಶೌಚಕ್ಕೆ ಹೋಗುವ ಪರಿಸ್ಥಿತಿ ಬರಬಾರದು. ಪ್ರತಿಯೊಂದು ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಸಮರ್ಪಕವಾಗಿ ಆಗಬೇಕು ಎಂದು ಅವರು
ಸಲಹೆ ನೀಡಿದರು.
ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ,  ಗ್ರಾಪಂ ಅಧ್ಯಕ್ಷರು, ಸದಸ್ಯರು ಗ್ರಾಮಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗುರಿ ಹೊಂದಿರಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಆದ್ಯತೆ, ಜಾಬ್‌ಕಾರ್ಡ್ ವಿತರಣೆ,
ಪಿಂಚಣಿ ಸೌಲಭ್ಯ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಲೈಬ್ರರಿ ಮತ್ತು ಓದುವ ಬೆಳಕು ಕಾರ್ಯಕ್ರಮ, ಡಿಜಿಟಲ್ ಲೈಬ್ರರಿ, ಘನತ್ಯಾಜ್ಯ ವಿಲೇವಾರಿ, ಸೋಲಾರ್ ಪ್ರಾಜೆಕ್ಟ್ ಗುರಿಗಳಿಗೆ ಆದ್ಯತೆ ನೀಡಬೇಕು. ಇದರ ಜೊತೆಗೆ ಎಲ್ಲ ಗ್ರಾಮಗಳಲ್ಲೂ ಕೋವಿಡ್
ಮೂರನೆ ಅಲೆ ನಿಯಂತ್ರಣಕ್ಕೆ ಗಮನ ಹರಿಸಬೇಕು ಎಂದು ಸೂಚಿಸಿದರು.
ಶಾಸಕರಾದ ಎಸ್.ಎ.ರವೀಂದ್ರನಾಥ, ಎಸ್.ವಿ.ರಾಮಚಂದ್ರ, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನಾ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಗಾಯತ್ರಿ, ಪರಿಸರವಾದಿ ಶಿವಾನಂದ ಕಳವೆ, ಜಯರಾಂ, ಜಿಪಂ ಸಿಇಓ ಡಾ.ವಿಜಯ ಮಹಾಂತೇಶ್ ದಾನಮ್ಮನವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ನರೇಗಾ ಯೋಜನೆ ಅನುಷ್ಠಾನದಲ್ಲಿ ಉತ್ತಮ ಸಾಧನೆ ತೋರಿದ ಅಧಿಕಾರಿ, ಪಿಡಿಓಗಳನ್ನು ಸನ್ಮಾನಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss