2024ರಲ್ಲಿ ನರೇಂದ್ರ ಮೋದಿಯವರೇ ಪ್ರಧಾನಿ ಅಭ್ಯರ್ಥಿ: ಗೃಹಸಚಿವ ಅಮಿತ್‌ ಶಾ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
“2024 ರಲ್ಲಿ ಬಿಜೆಪಿ- ಜೆಡಿಯು ಪಕ್ಷಗಳು ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ. ಹಾಲಿ ಪ್ರಧಾನಿ ನರೇಂದ್ರ ಮೋದಿಯವರೇ ಪ್ರಧಾನಿ ಅಭ್ಯರ್ಥಿ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಪಾಟ್ನಾದಲ್ಲಿ ಬಿಜೆಪಿಯ ವಿವಿಧ ಮೋರ್ಚಾಗಳ ಎರಡು ದಿನಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾ, ಬಿಜೆಪಿ ಪ್ರಧಾನಿ ಅಭ್ಯರ್ಥಿ ವಿಚಾರವಾಗಿ ಇದ್ದ ಎಲ್ಲಾ ಗೊಂದಲಗಳನ್ನು ನಿವಾರಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ನಿವೃತ್ತಿ ಹಾಗೂ ಹೊಸ ಮುಖದ ಪಟ್ಟಾಭಿಷೇಕದ ಬಗ್ಗೆ ಅನೇಕಾ ಊಹಾಪೋಹಗಳು ಕೇಳಿಬಂದಿದ್ದವು. ಮಾಜಿ ಬಿಜೆಪಿ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, 2024ರ ಲೋಕಸಭೆ ಮತ್ತು 2025ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಒಟ್ಟಾಗಿ ಸ್ಪರ್ಧಿಸಲಿವೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ’ ಎಂದಿದ್ದಾರೆ.
2024ರ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿಯೇ ಎದುರಿಸಲಾಗುವುದು, ಅವರೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. 2024ರಲ್ಲಿ ಹಾಗೂ 2025ರಲ್ಲಿ ನಾವು ಬಿಹಾರದಲ್ಲಿ ಒಟ್ಟಾಗಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.
ಸಭೆಯಲ್ಲಿ ಕಾಶ್ಮೀರದ ಮಹಿಳೆಯರು ತಯಾರಿಸಿದ ತ್ರಿವರ್ಣ ಧ್ವಜವನ್ನು ಎಲ್ಲ ಸದಸ್ಯರಿಗೆ ಹಂಚಲಾಯಿತು. ಈ ಮೂಲಕ ಆರ್ಟಿಕಲ್ 370 ರದ್ದಾದ ನಂತರ ಕಾಶ್ಮೀರದ ಜನರ ಚಿಂತನೆ ಬದಲಾಗುತ್ತಿದೆ ಎಂಬ ಸಂದೇಶ ರವಾನಿಸುವ ಪ್ರಯತ್ನ ನಡೆದಿದೆ. ದೇಶದ ಪ್ರತಿಯೊಂದು ಮೂಲೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸ್ವಾತಂತ್ರ್ಯದ ನಂತರ, ಮೋದಿ ಸರ್ಕಾರದಲ್ಲಿ ಹಳ್ಳಿಗಳು, ಬುಡಕಟ್ಟು ಪ್ರದೇಶಗಳು ಮತ್ತು ದಲಿತರಿಂದ ಗರಿಷ್ಠ ಸಂಖ್ಯೆಯ ಮಂತ್ರಿಗಳನ್ನು ಮಾಡಲಾಗಿದೆ. ಜನರ ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಶಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!