ಇಂದು ಚಂದ್ರನತ್ತ ಆರ್ಟೆಮಿಸ್-1 ಉಡಾವಣೆ: ಎಲ್ಲರ ಚಿತ್ತ ನಾಸಾದತ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಸಾ (ಅಮೆರಿಕನ್ ಬಾಹ್ಯಾಕಾಶ ಸಂಸ್ಥೆ) ಮತ್ತೊಮ್ಮೆ ಆರ್ಟೆಮಿಸ್-1 ಅನ್ನು ಚಂದ್ರನತ್ತ ಉಡಾವಣೆ ಮಾಡಲು ಸಿದ್ಧವಾಗಿದೆ. ಆರಂಭದಲ್ಲಿ ಎರಡು ಬಾರಿ ವಿಫಲವಾಗಿರುವ ಈ ಪ್ರಯೋಗ ಈ ಬಾರಿ ಯಶಸ್ವಿಯಾಗಲಿದೆ ಎಂದು ನಾಸಾ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಸಾ ಪ್ರಕಾರ, ಈ ಉಡಾವಣೆ ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 11.34 ಕ್ಕೆ ನಡೆಯಲಿದೆ. ನಾಸಾ ಕೇಪ್ ಕೆನವೆರಲ್‌ನಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ನಡೆಸಲಿದೆ.

ನಾಸಾ 2024 ರಲ್ಲಿ ಆರ್ಟೆಮಿಸ್ -2 ಅನ್ನು ಉಡಾವಣೆ ಮಾಡಲು ತೀರ್ಮಾನಿಸಿದ್ದು, ಗಗನಯಾತ್ರಿಗಳನ್ನು ಸಮೇತ ಚಂದ್ರನತ್ತ ಹೋಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಚಂದ್ರನ ಮೇಲೆ ಶಾಶ್ವತ ನೆಲೆ ಸ್ಥಾಪಿಸುವ ಭಾಗವಾಗಿ ನಾಸಾ ಈ ಪ್ರಯೋಗ ನಡೆಸುತ್ತಿದೆ. ಪ್ರಸ್ತುತ ಈ ಕಾರ್ಯಾಚರಣೆಯಲ್ಲಿರುವ ಓರಿಯನ್ ಕ್ಯಾಪ್ಸುಲ್ ಮಾನವರಹಿತವಾಗಿ ಚಂದ್ರನ ಕಕ್ಷೆಗೆ ಹೋಗಲಿದೆ. 2025 ರಲ್ಲಿ ಆರ್ಟೆಮಿಸ್-3 ಅನ್ನು ಉಡಾವಣೆ ಮಾಡಲು ನಾಸಾ ಈಗಾಗಲೇ ವ್ಯವಸ್ಥೆಗಳನ್ನು ಮಾಡುತ್ತಿರುವುದು ಗಮನಾರ್ಹವಾಗಿದೆ.

1972ರಲ್ಲಿ ಅಪೊಲೊ ಕಾರ್ಯಕ್ರಮ ಮುಗಿದ ನಂತರ ಮತ್ತೆ ಚಂದ್ರನತ್ತ ಗಗನಯಾತ್ರಿಗಳನ್ನು ಕಳುಹಿಸುವ ಪ್ರಯತ್ನ ನಡೆದಿರಲಿಲ್ಲ. ಆದರೆ ನಾಸಾ ಮತ್ತೊಮ್ಮೆ ಮನುಷ್ಯರನ್ನು ಚಂದ್ರನತ್ತ ಕಳುಹಿಸಲು ಪ್ರಯತ್ನಿಸಲಿದೆ. ಇದರ ಭಾಗವಾಗಿ ಆರ್ಟೆಮಿಸ್-1 ಅನ್ನು ಮಹತ್ವಾಕಾಂಕ್ಷೆಯಿಂದ ಪ್ರಾರಂಭಿಸಲಾಯಿತು. ನಾಸಾದ ಆರ್ಟೆಮಿಸ್-1 ಮಿಷನ್ ಈಗಾಗಲೇ ಎರಡು ಬಾರಿ ವಿಫಲವಾಗಿದೆ. ಕೆಲವು ಅನಿವಾರ್ಯ ಕಾರಣಗಳಿಂದ ಈ ವರ್ಷದ ಆಗಸ್ಟ್ 29 ರಂದು ಪ್ರಯೋಗವನ್ನು ಮುಂದೂಡಲಾಯಿತು. ಮತ್ತೆ ಸೆಪ್ಟೆಂಬರ್ 3 ರಂದು ಆರ್ಟೆಮಿಸ್-1 ಉಡಾವಣೆಗೆ ಎಲ್ಲವೂ ಸಿದ್ಧವಾದ ನಂತರ, ರಾಕೆಟ್‌ನಲ್ಲಿ ಇಂಧನ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ. ಸೂಪರ್ ಕೋಲ್ಡ್ ಹೈಡ್ರೋಜನ್ ಮತ್ತು ಆಮ್ಲಜನಕದ ಸೋರಿಕೆಯಿಂದಾಗಿ ಪ್ರಯೋಗವನ್ನು ಮುಂದೂಡಲಾಗಿದೆ. ಮತ್ತೆ ಇಂದು ಬೆಳಗ್ಗೆ 11.34ಕ್ಕೆ ನಾಸಾ ಈ ಪ್ರಯೋಗ ಆರಂಭಿಸಿದೆ. ಉಡಾವಣೆ ಆರಂಭದಲ್ಲೇ ಎರಡು ಬಾರಿ ವಿಫಲವಾಗಿರುವ ನಾಸಾದ ಆರ್ಟೆಮಿಸ್-1 ಉಡಾವಣೆ ಈ ಬಾರಿ ಯಶಸ್ವಿಯಾಗಲಿದೆಯೇ..? ಇನ್ನೊಮ್ಮೆ ಮುಂದೂಡುತ್ತಾರಾ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!