Wednesday, June 7, 2023

Latest Posts

ಬಿಜೆಪಿಗೆ ನೇಷನ್ ಫಸ್ಟ್, ಕಾಂಗ್ರೆಸ್ ಗೆ ಭ್ರಷ್ಟಾಚಾರವೇ ಧ್ಯೇಯವಾಕ್ಯ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಷನ್ ಫಸ್ಟ್ ಬಿಜೆಪಿಯ ಧ್ಯೇಯವಾಕ್ಯ. ಆದರೆ ಭ್ರಷ್ಟಾಚಾರ ಕಾಂಗ್ರೆಸ್ ನ ಧ್ಯೇಯವಾಕ್ಯ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಉಡುಪಿಗೆ ಆಗಮಿಸಿದ ಅವರು, ನಗರದ ಖಾಸಗಿ ಹೋಟೆಲಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಇದು ಕೇವಲ ಕರ್ನಾಟಕ ಚುನಾವಣೆ ಅಲ್ಲ, ಬದಲಾಗಿ ದೇಶದ ಚುನಾವಣೆಯಾಗಿದೆ. ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲದೇ ಮೋದಿಜೀಯವರ ಚುನಾವಣೆಯಾಗಿದೆ. ದೇಶದ ಆರ್ಥಿಕ ವ್ಯವಸ್ಥೆ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಂದಿದೆ. ಪ್ರಪಂಚದ ಬೇರೆ ದೇಶಗಳ ಆರ್ಥಿಕ ಸ್ಥಿತಿ ಹದಗಟ್ಟಿದೆ. ಆದರೆ ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದ್ದು ಹೆಮ್ಮೆಯಿಂದ ಭಾರತದ ಹೆಸರು ಹೇಳುತ್ತಿದ್ದಾರೆ. ಜಿ.20 ಅಧ್ಯಕ್ಷತೆ ನಮ್ಮ ದೇಶಕ್ಕೆ ಸಿಕ್ಕಿರುವುದು ಗೌರವದ ವಿಚಾರ. ಇದೆಲ್ಲವೂ ಮೋದಿಯವರ ನಾಯಕತ್ವದಿಂದಲೇ ಸಾಧ್ಯವಾಗಿರುವುದು ಎಂದವರು ಹೇಳಿದರು.

ಪ್ರತಿಯೊಂದು ರಾಜ್ಯದವರು ಬಿಜೆಪಿಯನ್ನು ಬಲಪಡಿಸಿದರೆ ಮಾತ್ರ ಮೋದಿಜಿ ಅವರ ಕೈ ಬಲಪಡಿಸಬಹುದು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರಕಾರ ಇದ್ದಾಗ ಜನರಿಗೆ ಅನುಕೂಲವಾಗಲಿದೆ. ನಮ್ಮ ಸರಕಾರ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಹಿಂದೆ ಇದ್ದ ಸರಕಾರದಿಂದ ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಉಳಿದಿತ್ತು. ಆದರೆ ನಮ್ಮ ಸರ್ಕಾರದ 8 ತಿಂಗಳ ಅಧಿಕಾರವಧಿಯಲ್ಲಿ ಮಹಾರಾಷ್ಟ್ರದ ಅಭಿವೃದ್ಧಿ ಮತ್ತೆ ಸಹಜವಾಗಿದೆ. ಕರ್ನಾಟಕಕ್ಕೂ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿದೆ ಎಂದರು.

ಕರಾವಳಿಗರಲ್ಲಿ ಅನೇಕರ ಕರ್ಮಭೂಮಿ ಮಹಾರಾಷ್ಟ್ರವಾಗಿದೆ. ಮುಂಬೈ, ಥಾಣೆ ನಗರಗಳಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬರಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಪ್ರತ್ಯೇಕ ಸರಕಾರಗಳಿದ್ದರೆ ವಿಕಾಸಕ್ಕೆ ಹಿನ್ನಡೆಯಾಗುತ್ತೆ ಎಂದವರು ಹೇಳಿದರು.

ಬಿಜೆಪಿ ಜೊತೆ ನಮ್ಮ ಸಹಭಾಗಿತ್ವ ಇರುವ ಕಾರಣ ಬಂದಿದ್ದೇನೆ. ನಾವು ಸ್ನೇಹ ಮಾಡುತ್ತೇವೆ ಮತ್ತು ಅದನ್ನು ನಿಭಾಯಿಸುತ್ತೇವೆ, ಅಭಿವೃದ್ದಿ ಈ ಚುನಾವಣೆಯ ಪ್ರಮುಖ ವಿಷಯವಾಗಿದ್ದು, ಕಾಂಗ್ರೆಸಿಗರು ಮೋದಿಜಿ ಅವರ ಬಗ್ಗೆ ಅಪಶಬ್ದ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿ ವಿಷ ಸರ್ಪ, ಗುಜರಾತ್ ಚುನಾವಣೆ ಕಾಲದಲ್ಲೂ ಮೌತ್ ಕ ಸೌದಾಗರ್, ಚೌಕಿದಾರ್ ಎಂದು ವ್ಯಂಗಿಸಿದ್ದರು. ಆದರೆ ಮೋದಿಯವರು ಯಾವುದಕ್ಕೂ ಸೇಡು ತೀರಿಸಿಕೊಂಡಿಲ್ಲ. ಜನರೇ ಸೇಡು ತೀರಿಸಿಕೊಂಡು ತಕ್ಕ ಪಾಠ ಕಲಿಸಿದ್ದಾರೆ. ಕರ್ನಾಟಕದ ಜನರು ಮೋದಿಜಿಗೆ ಮಾಡಿದ ಅವಮಾನ ಸಹಿಸುವುದಿಲ್ಲ, ಮೇ 10 ರಂದು ಉತ್ತರ ನೀಡಲಿದ್ದಾರೆ ಎಂದರು.

ಬಜರಂಗದಳ ನಿಷೇಧ ವಿಚಾರ ಮಾತನಾಡಿದ ಅವರು, ಬಜರಂಗದಳ ಒಂದು ದೇಶಭಕ್ತ ಸಂಘಟನೆಯಾಗಿದ್ದು, ಆರ್.ಎಸ್. ಎಸ್ ಒಂದು ದೇಶಭಕ್ತ ಸಂಘಟನೆಯಾಗಿದೆ. ರಾಷ್ಟ್ರಕ್ಕೆ ಸಂಕಟ ಬಂದಾಗ ತಮ್ಮ ಪ್ರಾಣ ಒತ್ತೆಗಿಟ್ಟು ಕೆಲಸ ಮಾಡುತ್ತಾರೆ. ಭಜರಂಗದಳ ಸಂಘಟನೆಯ ಬ್ಯಾನ್ ಹೇಗೆ ಮಾಡುತ್ತೀರಿ..? ಭಜರಂಗಿಯ ಅವಮಾನ ಮತ್ತು ಮೋದಿಜಿಯ ಅವಮಾನಕೆ ತಕ್ಕ ಉತ್ತರ ಸಿಗಲಿದೆ ಎಂದು ಕಾಂಗ್ರೆಸ್ ಗೆ ಚಾಟಿ ಬೀಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!