ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಮಂಡ್ಯ :
ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತ ವಿಶ್ವಗುರುವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಮಾರಚಾಕನಹಳ್ಳಿಯಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್, ಅನುಗ್ರಹಂ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ಛಾಯಾ ವಸತಿ ನಿಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪರಿವರ್ತನೆ ಆರಂಭವಾಗಲಿದೆ. ಇದರಿಂದ ದೇಶದ ಅಭಿವೃದ್ಧಿಯಲ್ಲೂ ಬಹಳ ದೊಡ್ಡ ಸುಧಾರಣೆ ಕಾಣಬಹುದಾಗಿದ್ದು, ಮುಂದಿನ ಪೀಳಿಗೆಗೆ ಹೊಸ ಶಿಕ್ಷಣ ನೀತಿ ವರವಾಗಲಿದೆ ಎಂದು ಹೇಳಿದರು.
ಪ್ರತಿಯೊಬ್ಬರ ಜೀವನ ಸಾರ್ಥಕಗೊಳ್ಳಬೇಕಾದರೆ ಶಿಕ್ಷಣಕ್ಕಿಂತ ರಾಜಮಾರ್ಗ ಬೇರೊಂದಿಲ್ಲ. ಶಿಕ್ಷಣ ಸದಾಕಾಲ ಅಭಿವೃದ್ಧಿಯಿಂದ ಮುನ್ನಡೆಯಬೇಕು. ಸಮಾಜಕ್ಕೆ ಸಮರ್ಪಣೆ ಮಾಡಿಕೊಳ್ಳುವ ಮನೋಭಾವವನ್ನು ಹೆಚ್ಚಿಸಬೇಕು. ಸಾರ್ಥಕತೆ ಇಲ್ಲದ ಬದುಕು ಬದುಕಲ್ಲ. ಎಲ್ಲರಿಗೂ ಸಮಾನತೆಯ ಶಿಕ್ಷಣ ಸಿಗಬೇಕಾದರೆ ಗುಣಾತ್ಮಕ ಶಿಕ್ಷಣ ನೀಡುವುದನ್ನು ಗುರಿಯಾಗಿಸಿಕೊಳ್ಳಬೇಕು ಎಂದರು.
ಜಾಗತೀಕರಣ, ಖಾಸಗೀಕರಣ ಯುಗದಲ್ಲಿ ಸ್ಪರ್ಧೆ ಹೆಚ್ಚಿದೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಅಗತ್ಯವಿದೆ. ಅದಕ್ಕಾಗಿ ಗುಣಾತ್ಮಕ ಶಿಕ್ಷಣದಿಂದ ಅವರನ್ನು ತಯಾರು ಮಾಡಬೇಕು. ಆಗ ಸ್ಪರ್ಧಾತ್ಮಕ ಯುಗದಲ್ಲಿ ಸದೃಢವಾಗಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.