ನೈಸರ್ಗಿಕ ವಿಪತ್ತು: 5 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ₹ 1,682.11 ಕೋಟಿ ಹೆಚ್ಚುವರಿ ಸಹಾಯಧನಕ್ಕೆ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು (ಎಚ್.ಎಲ್.ಸಿ) ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ (ಎನ್.ಡಿ.ಆರ್.ಎಫ್.) ಅಡಿಯಲ್ಲಿ 2021ನೇ ಸಾಲಿನಲ್ಲಿ ಪ್ರವಾಹ / ಭೂಕುಸಿತದಿಂದ ಹಾನಿಗೊಳಗಾದ ಐದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರದ ಹೆಚ್ಚುವರಿ ಸಹಾಯಧನವನ್ನು ಅನುಮೋದಿಸಿದೆ.

ಕಳೆದ ವರ್ಷ ಸಂಭವಿಸಿದ ಪ್ರವಾಹ/ಭೂಕುಸಿತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡಿಗೆ ಎನ್‌ಡಿಆರ್‌ಎಫ್‌ನಿಂದ ₹ 1,664.25 ಕೋಟಿ ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ₹ 17.86 ಕೋಟಿಗಳನ್ನು ಕೇಂದ್ರದ ಹೆಚ್ಚುವರಿ ನೆರವು ರೂಪದಲ್ಲಿ ನೀಡಲು ಎಚ್‌ಎಲ್‌ಸಿ ಅನುಮೋದಿಸಿದೆ.

ಕರ್ನಾಟಕಕ್ಕೆ ₹ 492.39 ಕೋಟಿ, ಆಂಧ್ರಪ್ರದೇಶಕ್ಕೆ ₹ 351.43 ಕೋಟಿ, ಹಿಮಾಚಲಪ್ರದೇಶಕ್ಕೆ ₹ 112.19 ಕೋಟಿ, ಮಹಾರಾಷ್ಟ್ರಕ್ಕೆ ₹ 355.39 ಕೋಟಿ, ತಮಿಳುನಾಡು ರಾಜ್ಯಕ್ಕೆ ₹ 352.85 ಕೋಟಿ ಮತ್ತು ಪುದುಚೇರಿಗೆ ₹ 17.86 ಕೋಟಿ ಹೆಚ್ಚುವರಿ ನೆರವು ನೀಡಲಾಗುತ್ತದೆ.

ಈ ಹೆಚ್ಚುವರಿ ನೆರವು ಈಗಾಗಲೇ ರಾಜ್ಯಗಳ ಮೀಸಲಿಟ್ಟಿರುವ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ (ಎಸ್.ಡಿ.ಆರ್.ಎಫ್.) ರಾಜ್ಯಗಳಿಗೆ ಕೇಂದ್ರವು ಬಿಡುಗಡೆ ಮಾಡಿದ ನಿಧಿಗಿಂತ ಅಧಿಕವಾಗಿದೆ. ಕೇಂದ್ರ ಸರಕಾರವು 2021-22ರ ಹಣಕಾಸು ವರ್ಷದಲ್ಲಿ ಈವರೆಗೆ 28 ರಾಜ್ಯಗಳಿಗೆ ಅವುಗಳ ಎಸ್‌ಡಿಆರ್‌ಎಫ್‌ ನಿಧಿಯಿಂದ ₹ 17,747.20 ಕೋಟಿ ಮತ್ತು ಎನ್‌ಡಿಆರ್‌ಎಫ್‌ನಿಂದ 8 ರಾಜ್ಯಗಳಿಗೆ ₹ 4,645.92 ಕೋಟಿ ಬಿಡುಗಡೆ ಮಾಡಿದೆ.

ಕೇಂದ್ರ ಸರಕಾರವು ಆ ರಾಜ್ಯಗಳ ಮನವಿಗೆ ಕಾಯದೆ ವಿಪತ್ತುಗಳು ಸಂಭವಿಸಿದ ಕೂಡಲೇ ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಂತರ-ಸಚಿವಾಲಯದ ಕೇಂದ್ರ ತಂಡಗಳನ್ನು (ಐಎಂಸಿಟಿಗಳು) ನಿಯೋಜಿಸಿತ್ತು. ಇದು ನೈಸರ್ಗಿಕ ವಿಕೋಪಗಳನ್ನು ಎದುರಿಸಿದ ಐದು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಜನರಿಗೆ ಸಹಾಯ ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಸಂಕಲ್ಪವನ್ನು ತೋರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!