Thursday, August 18, 2022

Latest Posts

ಎನ್‌ಡಿಎ ಕಾಸರಗೋಡು ವಿಧಾನಸಭಾ ಕ್ಷೇತ್ರದ ಚುನಾವಣಾ ಸಮಿತಿ ಕಾರ್ಯಾಲಯ ಉದ್ಘಾಟನೆ

ಹೊಸ ದಿಗಂತ ವರದಿ, ಕಾಸರಗೋಡು:

ಕೇರಳದಲ್ಲಿ ಎಡರಂಗ ಮತ್ತು ಐಕ್ಯರಂಗ ಒಕ್ಕೂಟಗಳು ಅದಲು ಬದಲಾಗಿ ಆಡಳಿತ ನಡೆಸಿ ಸರಕಾರಗಳು ಬದಲಾವಣೆಗೊಂಡಿವೆ. ಆದರೆ ಕೇರಳದ ವಾತಾವರಣ, ಜನ ಜೀವನ, ಅಭಿವೃದ್ಧಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದಕ್ಕೆ ರಾಜ್ಯವನ್ನಾಳಿದ ಎರಡೂ ಒಕ್ಕೂಟಗಳ ವೈಫಲ್ಯವೇ ಪ್ರಮುಖ ಕಾರಣ ಎಂದು ಬಿಜೆಪಿ ಕೇರಳ ರಾಜ್ಯ ಸಹ ಪ್ರಭಾರಿ ಹಾಗೂ ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್ ಆರೋಪಿಸಿದ್ದಾರೆ.
ಕಾಸರಗೋಡು ನಗರದ ಮಠದ ಪೇಟೆ ಸಮೀಪ ಪ್ರತ್ಯೇಕವಾಗಿ ಸಜ್ಜುಗೊಳಿಸಲಾದ ಎನ್‌ಡಿಎ ಕಾಸರಗೋಡು ವಿಧಾನಸಭಾ ಕ್ಷೇತ್ರದ ಚುನಾವಣಾ ಸಮಿತಿ ಕಾರ್ಯಾಲಯವನ್ನು ಬುಧವಾರ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ನವ ನಿರ್ಮಾಣ ಮೋದಿಯ ಜೊತೆಗೆ ಎಂಬುದು ಬಿಜೆಪಿಯ ಘೋಷಣೆಯಾಗಿದೆ. ಇಂದಿಲ್ಲಿ ಉದ್ಘಾಟನೆಗೊಂಡ ಕಚೇರಿಯು ಕೇವಲ ಚುನಾವಣಾ ಕಚೇರಿಯಾಗದೆ ಇದನ್ನು ವಿಜಯ ಕಚೇರಿಯನ್ನಾಗಿ ಪರಿವರ್ತಿಸಲು ಪಕ್ಷದ ಕಾರ್ಯಕರ್ತರು ಅವಿರತವಾಗಿ ಶ್ರಮಿಸಬೇಕೆಂದು ವಿ.ಸುನೀಲ್‌ಕುಮಾರ್ ಕರೆ ನೀಡಿದರು.
ಶಿಕ್ಷಣ, ಆರೋಗ್ಯ ಸಹಿತ ಸಕಲ ಅವಶ್ಯಕತೆಗಳಿಗೆ ಕಾಸರಗೋಡಿನ ಗಡಿ ಭಾಗದ ಜನರು ಸಮೀಪದ ಮಂಗಳೂರನ್ನು ಆಶ್ರಯಿಸಬೇಕಾದ ದುಃಸ್ಥಿತಿಯಿದೆ. ಅಭಿವೃದ್ಧಿ ಕಾಣಬೇಕಾದರೆ ಇಲ್ಲಿನ ಜನರು ಗಡಿ ಪ್ರದೇಶಕ್ಕೆ ತೆರಳಬೇಕು. ಇಲ್ಲಿಂದ ಆಯ್ಕೆಗೊಂಡ ಶಾಸಕರು ಕಾಸರಗೋಡನ್ನು ನಿರ್ಲಕ್ಷಿಸುತ್ತಿದ್ದಾರೆ. ಕೇರಳದಲ್ಲಿ ಅಭಿವೃದ್ಧಿ ಉಂಟಾಗಬೇಕಾದರೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು ಉತ್ತಮ ಸಾಮರ್ಥ್ಯ ಹೊಂದಿದ ಯುವಕರನ್ನು ಕಣಕ್ಕಿಳಿಸಿದೆ. ಕೆ.ಶ್ರೀಕಾಂತ್‌ರ ವಿಜಯಕ್ಕಾಗಿ ಕಾರ್ಯಕರ್ತರು ಗ್ರಾಮ, ಬೂತ್ ಮಟ್ಟದಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ಅದಕ್ಕಾಗಿ ಕಾರ್ಯಕರ್ತರು ಸಂಕಲ್ಪ ತೊಡಬೇಕು ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಎನ್‌ಡಿಎ ಕಾಸರಗೋಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ವಕೀಲ ಕೆ.ಶ್ರೀಕಾಂತ್ ಮಾತನಾಡಿ, ಕಾಸರಗೋಡಿನ ಜನರು ಕೊರೋನಾ ಹೆಸರಲ್ಲಿ ಒಂದು ವರ್ಷ ಲಾಕ್‌ಡೌನ್ ಕಷ್ಟ ನಷ್ಟ ಅನುಭವಿಸಿದುದಕ್ಕಿಂತ ಹೆಚ್ಚಾಗಿ ಕಳೆದ 45 ವರ್ಷಗಳಿಂದ ಅಪಾರ ಕಷ್ಟ ನಷ್ಟ ಅನುಭವಿಸಿದ್ದಾರೆ. ಇಲ್ಲಿಂದ ತಾನು ಚುನಾಯಿತನಾದರೆ ಇಲ್ಲಿನ ಜನರಿಗೆ ಅನ್‌ಲಾಕ್ ಆರಂಭಗೊಳ್ಳಲಿದೆ ಎಂದರು.
ಇಲ್ಲಿಂದ ಆಯ್ಕೆಗೊಳ್ಳುವ ಶಾಸಕರು ಪ್ರಭಾವಶಾಲಿಗಳಲ್ಲ. ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಇವರಿಗೆ ಮಾಫಿಯಾ ಜೊತೆ ನಿಕಟ ನಂಟು ಇದೆ. ಇಲ್ಲಿನ ಮುಸ್ಲಿಂಲೀಗ್ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಯುಡಿಎಫ್‌ನ ಘಟಕ ಪಕ್ಷವಾದ ಕಾಂಗ್ರೆಸ್‌ನ ನಾಯಕರೇ ಆರೋಪಿಸುತ್ತಿದ್ದಾರೆ. ಇಲ್ಲಿನ ಜನರು ಅಭಿವೃದ್ಧಿಗಾಗಿ ಹಾತೊರೆಯುತ್ತಿದ್ದಾರೆ. ಕೇಂದ್ರ ಸರಕಾರದ ಹಲವಾರು ಜನೋಪಕಾರಿ ಯೋಜನೆಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲು ಶಾಸಕರು ಆಸಕ್ತಿ ತೋರುತ್ತಿಲ್ಲ. ನಾನು ಇಲ್ಲಿಂದ ಚುನಾಯಿತನಾದರೆ ಓರ್ವ ಶಾಸಕ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ತೋರಿಸಿ ಕೊಡಲಿದ್ದೇನೆ. ಗೆಲುವು ಅಭಿವೃದ್ಧಿಗಾಗಿ, ಅಭಿವೃದ್ಧಿ ಗೆಲುವಿಗಾಗಿ ಎಂದು ಕೆ.ಶ್ರೀಕಾಂತ್ ಹೇಳಿದರು.
ಬಿಜೆಪಿ ನೇತಾರ ರವೀಶ ತಂತ್ರಿ ಕುಂಟಾರು, ಬಿಡಿಜೆಎಸ್ ಜಿಲ್ಲಾಧ್ಯಕ್ಷ ಗಣೇಶ್ ಪಾರೆಕಟ್ಟೆ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಎಂ.ಸಂಜೀವ ಶೆಟ್ಟಿ , ಸುರೇಶ್‌ಕುಮಾರ್ ಶೆಟ್ಟಿ ಪೂಕಟ್ಟೆ , ಪಿ.ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ, ಜಿಲ್ಲಾ ಪಂಚಾಯತ್ ಸದಸ್ಯೆ ಎಂ.ಶೈಲಜಾ ಭಟ್, ಮಧೂರು ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ , ಕಾರಡ್ಕ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಸತೀಶ್ ಕುಂಪಲ, ನ್ಯಾಯವಾದಿ ಎ.ಸದಾನಂದ ರೈ , ಕೆ.ವಿಠಲ ಶೆಟ್ಟಿ , ಸುರೇಶ್, ಎಂ.ಪಿ.ರಾಮಪ್ಪ ಮಂಜೇಶ್ವರ, ಎಸ್.ಕುಮಾರ್, ಕೆ.ಎನ್.ಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಸವಿತಾ ಟೀಚರ್ ಅವರು ಎನ್‌ಡಿಎ ಅಭ್ಯರ್ಥಿ ಕೆ.ಶ್ರೀಕಾಂತ್ ಮತ್ತು ಶಾಸಕ ವಿ.ಸುನೀಲ್‌ಕುಮಾರ್ ಅವರ ಹಣೆಗೆ ತಿಲಕವಿಟ್ಟು ಆರತಿ ಬೆಳಗಿದರು. ಇದಕ್ಕೂ ಮೊದಲು ಮಠದ ಪೇಟೆಯಿಂದ ಹೊರಟ ಮೆರವಣಿಗೆಗೆ ನೇತಾರರಾದ ಧನಂಜಯ ಮಧೂರು, ಎನ್.ಸತೀಶ್, ಜಿ.ಚಂದ್ರನ್, ಉಮಾ ಕಡಪ್ಪುರ, ಶ್ರೀಲತಾ ಟೀಚರ್, ಎಂ.ಜನನಿ ಮೊದಲಾದವರು ನೇತೃತ್ವ ನೀಡಿದರು.
ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಕುಮಾರ ಕುದ್ರೆಪ್ಪಾಡಿ, ಸ್ವಾಗತಿಸಿ, ಪಿ.ಆರ್.ಸುನೀಲ್ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!