Friday, August 19, 2022

Latest Posts

ಜಿಲ್ಲಾ ಬಾಲಭವನ ಅಭಿವೃದ್ಧಿಗೆ ಅಗತ್ಯ ನೆರವು: ಚಿಕ್ಕಮ್ಮ ಬಸವರಾಜ್

 ಹೊಸ ದಿಗಂತ ವರದಿ, ಚಿತ್ರದುರ್ಗ:

ಇಲ್ಲಿನ ಬಾಲ ಭವನ ಅಭಿವೃದ್ಧಿ ಮಾಡಿ ಹೈಟೆಕ್ ಸ್ಪರ್ಶ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದಲ್ಲಿ ಕೇಂದ್ರ ಬಾಲ ಭವನದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಬಾಲ ಭವನ ಸೊಸೈಟಿ ಅಧ್ಯಕ್ಷರಾದ ಚಿಕ್ಕಮ್ಮ ಬಸವರಾಜ್ ಹೇಳಿದರು.
ನಗರದ ಜಿಲ್ಲಾ ಬಾಲ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಅಧಿಕಾರಿಗಳು ಜಿಲ್ಲಾ ಬಾಲ ಭವನದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆದಾಗ್ಯೂ ಕೆಲವು ನೂನ್ಯತೆಳಿವೆ. ಅವನ್ನು ಸರಿಪಡಿಸಿ ಅಭಿವೃದ್ಧಿ ಮಾಡಬೇಕಾದ ಅಗತ್ಯವಿದೆ. ಹಾಗಾಗಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಇಲ್ಲಿ ಮೀನು ಮತ್ತು ಮೊಲಗಳ ಸಾಕಾಣಿಕೆ ಮಾಡಲಾಗುತ್ತಿತ್ತು. ಆದರೆ ಅವುಗಳಿಗೆ ಕಳ್ಳರ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಾಲ್ಕು ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗುವುದು. ಬಾಲ ವೇದಿಕೆ ಹಾಳಾಗಿದ್ದು ದುರಸ್ತಿ ಮಾಡಿಸಲಾಗುವುದು. ಅಲ್ಲದೇ ಮೇಲ್ಛಾವಣಿ ಹಾಕಲಾಗುವುದು. ಸ್ಕ್ರೀನ್, ಆಸನಗಳ ವ್ಯವಸ್ಥೆ ಮಾಡಿದಲ್ಲಿ ಶಾಲಾ ಕಾಲೇಜುಗಳ ವಾರ್ಷಿಕೋತ್ಸವವ ಸಮಾರಂಭಗಳಿಗೆ ಬಾಡಿಗೆ ನೀಡಬಹುದು. ಇದರಿಂದ ಆದಾಯ ಬರುತ್ತದೆ ಎಂದು ಕಿವಿಮಾತು ಹೇಳಿದರು.
ರಾಜ್ಯದ 30 ಜಿಲ್ಲೆಗಳಲ್ಲಿ ಬಾಲ ಭವನ ಇವೆ. ಇವುಗಳಲ್ಲಿ 18 ಸ್ವಂತ ಕಟ್ಟಡ ಹಾಗೂ 12 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ೫ ಜಿಲ್ಲೆಗಳಲ್ಲಿ ಪಟಾಣಿ ರೈಲಿನ ವ್ಯವಸ್ಥೆ ಮಾಡಲಾಗಿದೆ. ಚಿತ್ರದುರ್ಗದಲ್ಲೂ ಮಾಡುವ ಉದ್ದೇಶವಿದೆ. ಆದರೆ ಜಾಗದ ಸಮಸ್ಯೆ ಎದುರಾಗಿದೆ. ಬಾಲ ಭವನ ನಿರ್ಮಾಣಕ್ಕೆ ಒಟ್ಟು 6 ಎಕರೆ ಜಮೀನಿನ ಅಗತ್ಯವಿದೆ. ಆದರೆ ಇಲ್ಲಿ ಕೇವಲ 3.1 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಹಾಗಾಗಿ ಇಲ್ಲಿ ರೈಲಿನ ವ್ಯವಸ್ಥೆ ಮಾಡಲು ಆಗುವುದಿಲ್ಲ. ಪ್ರತ್ಯೇಕ ಜಾಗ ದೊರೆತಲ್ಲಿ ರೈಲಿನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ರಾಜಾನಾಯ್ಕ್, ಶಿಶು ಅಭಿವೃದ್ಧಿ ಅಧಿಕಾರಿಗಳಾದ ಸುಧಾ, ವೀಣಾ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!