Wednesday, June 29, 2022

Latest Posts

ಹೇಳಿಕೆಯನ್ನು ತಿರುಚಬೇಡಿ: ನದೀಮ್ ವಿರುದ್ಧದ ನೆಟ್ಟಿಗರ ಟೀಕೆಗೆ ನೀರಜ್​ ಬೇಸರ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಪಾಕಿಸ್ತಾನದ ಜಾವೆಲಿನ್ ಸ್ಟಾರ್ ಅಶ್ರಫ್ ನದೀಮ್ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ, ಈ ಕಾರಣದಿಂದಾಗಿ ಅವರು ನೆರೆಯ ರಾಷ್ಟ್ರದಲ್ಲಿಯೂ ಸಹ ಮೆಚ್ಚುಗೆ ಪಡೆದಿದ್ದಾರೆ. ಆದಾಗ್ಯೂ, ಇತ್ತೀಚೆಗೆ ನೀರಜ್ ಚೋಪ್ರಾ ತನ್ನ ಪಾಕಿಸ್ತಾನಿ ಪಾಲುದಾರನ ಬಗ್ಗೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಚಿತ್ರಿಸಲಾಗಿದೆ, ಈ ಕಾರಣದಿಂದಾಗಿ ನೀರಜ್ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಿಂದ ಮರಳಿದ ನಂತರ ನೀರಜ್ ಚೋಪ್ರಾ ನಿರಂತರವಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಸಮಯದಲ್ಲಿ, ಅವರು ಪಾಕಿಸ್ತಾನಿ ಆಟಗಾರ ಅಶ್ರಫ್ ಬಗ್ಗೆ ಒಂದು ಘಟನೆಯನ್ನು ಹಂಚಿಕೊಂಡಿದ್ದರು. ಜನರು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ತಪ್ಪಾದ ರೀತಿಯಲ್ಲಿ ಪ್ರಸ್ತುತಪಡಿಸಲು ಆರಂಭಿಸಿದ್ದಾರೆ. ಇದನ್ನು ಕಂಡ ನೀರಜ್ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಹಾಗೆ ಮಾಡದಂತೆ ಮನವಿ ಮಾಡಿದರು.

ನೀರಜ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಟೋಕಿಯೋ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ನಾನು ನನ್ನ ಜಾವೆಲಿನ್ ಅನ್ನು ಹುಡುಕುತ್ತಿದ್ದೆ. ಆದರೆ ಅದು ಎಲ್ಲೂ ಸಿಗಲಿಲ್ಲ. ಆಗ ಪಾಕಿಸ್ತಾನದ ಅರ್ಷದ್ ನದೀಮ್ ಆ ಜಾವೆಲಿನ್ ಅನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುವುದನ್ನು ನಾನು ನೋಡಿದೆ. ನಾನು ತಕ್ಷಣ ಆತನ ಬಳಿಗೆ ಹೋಗಿ, ಸಹೋದರ ಇದು ನನ್ನ ಜಾವೆಲಿನ್, ನನಗೆ ಕೊಡು, ನಾನು ಈಗ ಎಸೆಯಲು ಹೋಗಬೇಕು ಎಂದೆ. ನಂತರ ನದೀಮ್ ನನಗೆ ಜಾವೆಲಿನ್ ವಾಪಸ್ ಕೊಟ್ಟರು. ಅಷ್ಟರಲ್ಲಾಗಲೇ ನನಗೆ ನೀಡಿದ್ದ ಸಮಯ ಮುಗಿಯುವುದರಲಿತ್ತು. ಆದ್ದರಿಂದ ನಾನು ಆತುರದಿಂದ ಮೊದಲ ಎಸೆತವನ್ನು ಎಸೆದೆ ಎಂದಿದ್ದಾರೆ.

ಈ ಹೇಳಿಕೆಯನ್ನು ಬಳಸಿಕೊಂಡ ಕೆಲವು ನೆಟ್ಟಿಗರು ಪಾಕಿಸ್ತಾನದ ಅರ್ಷದ್​​, ನೀರಜ್​ ಅವರ ಜಾವೆಲಿನ್ ​ಅನ್ನು ಟ್ಯಾಂಪರಿಂಗ್ ಮಾಡಲು ಪ್ರಯತ್ನಿಸಿದ್ದರು. ಆದರೆ, ನೀರಜ್​ಗೆ ಕೈಯಲ್ಲಿ ಸಿಕ್ಕಿಬಿದ್ದರು ಎಂದೆಲ್ಲಾ ಕಮೆಂಟ್​ ಮಾಡಿದ್ದರು. ಇನ್ನೂ ಕೆಲವರು ಫೈನಲ್ಸ್​ ವೇಳೆ ಚೋಪ್ರಾ ನದೀಮ್​ರಿಂದ ಜಾವಲಿನ್ ಪಡೆಯುತ್ತಿರುವ ವಿಡಿಯೋವನ್ನು ಬಳಸಿ ನದೀಮ್​ ಅವರನ್ನು ಟೀಕಿಸಿದ್ದರು.

ಆದರೆ, ಇದರ ಬಗ್ಗೆ ಸ್ಪಷ್ಟನೆ ನೀಡಿರುವ ನೀರಜ್, “ನಿಮ್ಮ ಹಿತಾಸಕ್ತಿಗಳು ಮತ್ತು ಪ್ರಚಾರವನ್ನು ಹೆಚ್ಚಿಸಿಕೊಳ್ಳಲು ದಯವಿಟ್ಟು ನನ್ನನ್ನು ಮತ್ತು ನನ್ನ ಕಮೆಂಟ್‌ಗಳನ್ನು ಮಾಧ್ಯಮವಾಗಿ ಬಳಸಬೇಡಿ ಎಂದು ನಾನು ಎಲ್ಲರಿಗೂ ವಿನಂತಿಸುತ್ತೇನೆ. ಕ್ರೀಡೆಗಳು ನಮಗೆ ಒಗ್ಗಟ್ಟು ಮತ್ತು ಒಂದಾಗುವಿಕೆಯನ್ನು ಕಲಿಸುತ್ತದೆ. ನನ್ನ ಇತ್ತೀಚಿನ ಕಮೆಂಟ್​ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳು ನನಗೆ ನಿರಾಸೆ ತರಿಸಿದೆ ” ಎಂದು ಚೋಪ್ರಾ ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.

ಯಾವುದೇ ಎಸೆತಗಾರ ಸ್ಪರ್ಧೆಯಲ್ಲಿ ಯಾರದೇ ಜಾವೆಲಿನ್​ ಅನ್ನಾದರೂ ಎಸೆಯಬಹುದು, ಇದಕ್ಕೆ ಯಾವುದೇ ನಿಯಮಗಳಿಲ್ಲ ಎಂದು 23 ವರ್ಷದ ನೀರಜ್ ನದೀಮ್ ತಮ್ಮ ಜಾವೆಲಿನ್​ ಕದಿಯಲು ಅಥವಾ ಇನ್ಯಾವುದೇ ದುಷ್ಕೃತ್ಯ ಎಸಗಲು ಪ್ರಯತ್ನಿಸಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನನ್ನ ಇತ್ತೀಚಿನ ಹೇಳಿಕೆ ಬಗ್ಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ಸಂದರ್ಶನವೊಂದರಲ್ಲಿ ನಾನು ಪಾಕಿಸ್ತಾನದ ಅರ್ಷದ್​ ನದೀಮ್​ ನನ್ನ ಜಾವೆಲಿನ್​ ಉಪಯೋಗಿಸುತ್ತಿದ್ದರು ಎಂದು ನಾನು ಹೇಳಿದ್ದೆ. ಇಂತಹ ಚಿಕ್ಕ ವಿಷಯವನ್ನು ದೊಡ್ಡ ವಿವಾದವನ್ನಾಗಿ ಮಾಡಲಾಗಿದೆ.ನಾವು ನಮ್ಮ ವೈಯಕ್ತಿಕ ಜಾವಲಿನ್​ಅನ್ನು ರ್ಯಾಕ್​ನಲ್ಲಿ ಇಟ್ಟಿರುತ್ತೇವೆ. ಅದು ನಿಯಮವಾಗಿದೆ. ನದೀಮ್​ ಅಲ್ಲಿ ನನ್ನ ಜಾವೆಲಿನ್ ತೆಗೆದುಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರು ನನ್ನ ಜಾವೆಲಿನ್​ನಲ್ಲಿ ತಮ್ಮ ಎಸೆತಕ್ಕಾಗಿ ಸಿದ್ಧರಾಗುತ್ತಿದ್ದರು. ಆ ಸಂದರ್ಭದಲ್ಲಿ ನನ್ನ ಅವಕಾಶ ಬಂದಿದ್ದರಿಂದ ನಾನು ಅವರನ್ನು ಜಾವೆಲಿನ್ ಕೇಳಿ ಪಡೆದುಕೊಂಡೆ. ಇದೊಂದು ದೊಡ್ಡ ವಿಚಾರವಲ್ಲ” ಎಂದು ಚೋಪ್ರಾ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss