ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಅಂಕೋಲಾ:
ಸಣ್ಣ ನೀರಾವರಿ ಇಲಾಖೆಯ ಸಚಿವ ಜೆ.ಸಿ.ಮಾಧುಸ್ವಾಮಿಯವರು ಅಂಕೋಲಾ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಇಲಾಖೆಗೆ ಸಂಬಂಧಿಸಿದಂತೆ ಸಂಭವಿಸಿರುವ ಹಾನಿಗಳ ಪರಿಶೀಲನೆ ನಡೆಸಿದರು.
ಅಗಸೂರು ಹೊನ್ನಳ್ಳಿಯ ಏತ ನೀರಾವರಿ ಪ್ರದೇಶಕ್ಕೆ ಭೇಟಿ ನೀಡಿದ ಅವರು ಪ್ರವಾಹದಿಂದ ಉಂಟಾದ ಹಾನಿಗಳ ಕುರಿತು ವೀಕ್ಷಣೆ ನಡೆಸಿ ಸರಿಯಾದ ರೀತಿಯಲ್ಲಿ ಸರ್ವೆ ಕಾರ್ಯ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹೊನ್ನಳ್ಳಿಯ ಏತ ನೀರಾವರಿ ಘಟಕದ ಅವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ 2019 ರ ಪ್ರವಾಹದ ಹಾನಿಯ ನಂತರ ಹೊಸ ಘಟಕದ ನಿರ್ಮಾಣದ ಪ್ರಸ್ತಾವನೆ ಕಳುಹಿಸದಿರುವ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಹೊಸ ಘಟಕವನ್ನು ಮುಳುಗಡೆ ಆಗದ ಹಾಗೆ ಸೂಕ್ತ ಎತ್ತರದ ಪ್ರದೇಶದಲ್ಲಿ ನಿರ್ಮಿಸಲು ಸೂಚಿಸಿದರು.
ಗಂಗಾವಳಿ ನದಿಯ ಹೊಸೂರು ಕೊಡಸಣಿ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿ ಸೇತುವೆ ಬಳಿ ನದಿಯ ಎರಡೂ ಭಾಗಗಳಲ್ಲಿ ಉಂಟಾಗುವ ಮಣ್ಣು ಕೊರೆತದ ಕುರಿತಂತೆ ಜಿ.ಪಿ.ಎಸ್ ಆಧಾರಿತ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದ
ಸಚಿವ ಮಾಧುಸ್ವಾಮಿ ಅವರು ಈ ಸಂದರ್ಭದಲ್ಲಿ ಮಾತನಾಡಿ ಕಾರವಾರ, ಅಂಕೋಲಾ, ಯಲ್ಲಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ ಸಣ್ಣ ನೀರಾವರಿ ಇಲಾಖೆಯ ಯೋಜನೆಗಳಿಗೆ ತೀವ್ರ ಹಾನಿ ಸಂಭವಿಸಿದ್ದು ಇಲಾಖೆಯ ವತಿಯಿಂದ ಕೈಗೊಳ್ಳಬೇಕಾದ ಅವಶ್ಯಕ ಕಾಮಗಾರಿಗಳ ಕುರಿತಂತೆ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ರಾಜ್ಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಉಪ ನಿರ್ದೇಶಕ ವಿನೋದ, ಮುಖ್ಯ ಇಂಜಿನಿಯರ್ ರೂಪಾ, ತಹಶೀಲ್ಧಾರ ಉದಯ ಕುಂಬಾರ ಮೊದಲಾದವರು ಉಪಸ್ಥಿತರಿದ್ದರು.
ಗುಳ್ಳಾಪುರಕ್ಕೆ ಭೇಟಿ
ಸಚಿವ ಮಾಧುಸ್ವಾಮಿ ಅವರು ಗುಳ್ಳಾಪುರದಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ಏತ ನೀರಾವರಿ ಯೋಜನೆಯ ಪರಿಶೀಲನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾನಿಗೊಳಗಾದ ನೀರಾವರಿ ಯೋಜನೆಗಳ ಮಾಹಿತಿ ನೀಡಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಕಿರು ಜಲಾಶಯ ಯೋಜನೆ
ರಾಜ್ಯದ ಪಶ್ಚಿಮ ಘಟ್ಟಗಳ ತಳಭಾಗದಲ್ಲಿ 1400 ಕಿರು ಜಲಾಶಯಗಳನ್ನು ಸೂಕ್ಷ್ಮ ಪರಿಸರಕ್ಕೆ ಮತ್ತು ಅರಣ್ಯ ಭೂಮಿಗೆ ದಕ್ಕೆ ಬಾರದ ರೀತಿಯಲ್ಲಿ ನಿರ್ಮಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾರವಾರದಲ್ಲಿ ಮಾದ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಹಸಿರು ಪಶ್ಚಿಮ ಘಟ್ಟದ ಒಡಲಿನಲ್ಲಿಯೇ ಕಾಮಗಾರಿ ನಡೆಯಲಿದೆ ಎಂಬ ತಪ್ಪು ಕಲ್ಪನೆ ಬೇಡ ನೀರು ಹರಿಯುವ ಪ್ರದೇಶದಲ್ಲಿ ಎರಡರಿಂದ ಮೂರು ಅಡಿ ಎತ್ತರದ ಕಿರು ಜಲಾಶಯಗಳನ್ನು ಪರಿಸರಕ್ಕೆ ತೊಂದರೆಯಾಗದಂತೆ ನಿರ್ಮಿಸಿ ನೀರಾವರಿಯ ಅಗತ್ಯ ಇರುವವರು ಬಳಸಿಕೊಳ್ಳಲು ಅನುಕೂಲ ಕಲ್ಪಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ಹೇಳಿದರು.