Saturday, February 24, 2024

200 ವರ್ಷ ಆಳಿದ ರಾಜನನ್ನೇ ಕೆಳಗಿಸಿದ್ದ ಮಾವೋವಾದಿಗಳು ಜನರ ನಿರೀಕ್ಷೆ ಉಳಿಸಿಕೊಂಡರೇ? ನೇಪಾಳ ಚುನಾವಣೆಯತ್ತ ಒಂದು ನೋಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇ 28, 2008.. ಅದು ನೇಪಾಳದ ಇತಿಹಾಸದಲ್ಲಿ ನೆನಪಿಡುವ ದಿನ. ರಾಜಪ್ರಭುತ್ವವನ್ನು ರದ್ದುಪಡಿಸಲಾಗಿದೆ ಎಂದು ಸಂಸತ್ತಿನಲ್ಲಿ ಮಾಡಲಾಗುತ್ತಿದ್ದ ಘೋಷಣೆಯನ್ನು ಸ್ವಾಗತಿಸಲು ರಾಜಧಾನಿ ಕಠ್ಮಂಡು ಮತ್ತು ಇತರ ನಗರಗಳು ಮತ್ತು ಹಳ್ಳಿಗಳ ಬೀದಿಗಳಲ್ಲಿ ಜನಸಮೂಹ ಸಂತೋಷದ ನೆರೆದಿತ್ತು. ಅಲ್ಲಿನ ಜನಪ್ರಿಯವಲ್ಲದ ರಾಜ ಜ್ಞಾನೇಂದ್ರನಿಗೆ ರಾಜಮನೆತನವನ್ನು ತೊರೆಯಲು 15 ದಿನಗಳ ಕಾಲಾವಕಾಶ ನೀಡಲಾಯಿತು. ಅಲ್ಲಿಗೆ ಅರಮನೆಯ ಒಳಸಂಚುಗಳು, ದುಷ್ಟಕೂಟಗಳ ಅಧಿಕಾರದ ಹಪಾಹಪಿ, ಜನರು ಶೋಷಣೆಗಳಿಗೆ ಒಳಗಾಗುತ್ತಿದ್ದ ಕಾಲ ಮುಗಿದು ನೇಪಾಳಿಗಳು ಮುಂದೆ ಉತ್ತಮ ಭವಿಷ್ಯಕ್ಕಾಗಿ ಎದುರು ನೋಡುತ್ತಿದ್ದರು. ಅಲ್ಲಿನ ಪರ್ವತಗಳನ್ನು ಬಳಸಿಬಂದು ಬೀಸುವ ಗಾಳಿಯಲ್ಲಿ ಅಂದು ಅಹ್ಲಾದವಿತ್ತು. ಸಂಭ್ರಮವಿತ್ತು, ನೇಪಾಳಿಗಳ ಸಣ್ಣ ಕಣ್ಣುಗಳಲ್ಲಿ ಹೊಸ ಭರವಸೆಗಳು ಹೊಳೆಯುತ್ತಿದ್ದವು.
ದಶಕಗಳ ಕಾಲ ಕಠಿಣ ನಿರಂತರ ಸಶಸ್ತ್ರ ಸಂಘರ್ಷದ (1996-2006) ಬಳಿಕ ಮಾವೋವಾದಿಗಳು ಅಂತಿಮವಾಗಿ ನೇಪಾಳವನ್ನು ರಾಜ ಮನೆತನ ತೆಕ್ಕೆಯಿಂದ ಜಾರಿಸುವಲ್ಲಿ ಯಶಸ್ವಿಯಾದರು. ಮಾವೋವಾದಿಗಳ ಸತತ ಹೋರಾಟದ ಫಲವಾಗಿ 200 ವರ್ಷಗಳ ಕಾಲ ಆಳಿದ ಶಾ ರಾಜವಂಶದ ಕೊನೆಯ ರಾಜ ಅಂದು ಪಟ್ಟದಿಂದ ಕೆಳಗಿಳಿದು ನೇಪಾಳವನ್ನು ನೇಪಾಳಿಗರಿಗೆ ಒಪ್ಪಿಸಿದ್ದ. 2006 ರಲ್ಲಿ ಮಾವೋವಾದಿಗಳು ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ಮೂಲಕ ಹಿಂಸಾಚಾರವನ್ನು ತ್ಯಜಿಸಲು, ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸೇರುವ ಭರವಸೆ ನೀಡಿದರು. ಆ ಒಪ್ಪಂದವು ಮಾವೋವಾದಿ ಬಂಡುಕೋರರು ಮತ್ತು ದೇಶವನ್ನು ಧ್ವಂಸಗೊಳಿಸಿದ ಸರ್ಕಾರಿ ಪಡೆಗಳ ನಡುವಿನ ಸಶಸ್ತ್ರ ಘರ್ಷಣೆಯ ಅಂತ್ಯಕ್ಕೆ ಕಾರಣವಾಗಿತ್ತು. ಅಲ್ಲಿಗೆ ನೇಪಾಳದ ರಾಜಕೀಯ ಹೊಸ ತಿರುವು ಪಡೆಯಲು ಸಜ್ಜಾಗಿತ್ತು. ಮಾವೋವಾದಿಗಳ ಮೇಲೆ ಜನರ ನಿರೀಕ್ಷೆಗಳು ಹಿಮಾಲಯದಷ್ಟಿದ್ದವು. ಅಧಿಕಾರದ ಆಟಕ್ಕಾಗಿ ಜನರ ಜೀವನದ ಜೊತೆಗೆ ಆಡಿಕೊಳ್ಳುವ ಸಾಂಪ್ರದಾಯಿಕ ರಾಜಕಾರಣಿಗಳಿಂದ ದೂರವಿರುವ ಶುದ್ಧ ಮತ್ತು ದಕ್ಷ ಸರ್ಕಾರವನ್ನು ಮಾವೊವಾದಿಗಳು ಖಚಿತವಾಗಿ ನೀಡುತ್ತಾರೆ ಎಂದು ಹಲವರು ನಂಬಿದ್ದರು.
ಅದಾದ ಬಳಿಕ ನೇಪಾಳ ಅಭಿವೃದ್ಧಿ ಕಡೆಗೆ ದಿಕ್ಕು ಬದಲಾಯಿಸಿತಾ? ಈ ಪ್ರಶ್ನೆಗೆ ಉತ್ತರ ಉಹೂಂ..
ಮಾವೊವಾದಿಗಳು ಅಲ್ಲಿನ ಅಧಿಕಾರವನ್ನ ಆಕ್ರಮಿಸಿಕೊಂಡ ಮೇಲೆ ನೇಪಾಳದಲ್ಲಿ ಸ್ಥಳೀಯ ಮಟ್ಟದವರೆಗೂ ಜನಪ್ರತಿನಿಧಿಗಳನ್ನು ಹೊಂದಿರುವ ಆಧುನಿಕ ಪ್ರಜಾಪ್ರಭುತ್ವ ಮಾದರಿಯ ಆಡಳಿತವನ್ನು ರೂಪಿಸಿದರು. 2015 ರಲ್ಲಿ ಅವರು ಜಾರಿಗೆ ತಂಡ ಹೊಸ ರಿಪಬ್ಲಿಕನ್ ಸಂವಿಧಾನಲ್ಲಿ ಉಲ್ಲೇಖಿಸಿದ ವಿಚಾರಗಳ ಬಗ್ಗೆ ನೇಪಾಳ ಬುಡಕಟ್ಟು ಗುಂಪುಗಳು ಮತ್ತು ಭಾರತೀಯ ಮೂಲದ ಮಾದೇಶಿಗಳಿಗೆ ತೀವ್ರ ಅಸಮಾಧಾನ ವಿತ್ತು.
ಜೊತೆಗೆ, ಜನರಿಗೆ ನಿರಾಸೆ ಕಾದಿತ್ತು. ಕ್ರಾಂತಿಯು ರಾಜಪ್ರಭುತ್ವವನ್ನು ತೊಡೆದುಹಾಕುವಲ್ಲಿ ಯಶಸ್ವಿಯಾದರೂ, ಮಾವೋವಾದಿಗಳು ಉತ್ತಮ ಆಡಳಿತವನ್ನು ನೀಡಲು ವಿಫಲರಾದರು. ಮಾವೋ ಗಳಿಂದಾಗಿ ನೇಪಾಳ ಮತ್ತಷ್ಟು ಕುಸಿದುಹೋಯ್ತು. 10 ವರ್ಷಗಳ ನಾಗರಿಕ ಕಲಹದಿಂದ ನಲುಗಿಹೋಗಿದ್ದ ನೇಪಾಳಕ್ಕೆ ಚೇತರಿಸಿಕೊಳ್ಳಲು ಕೆಲಸ ಮಾಡುವ ಸರ್ಕಾರದ ಅಗತ್ಯತೆ ಇತ್ತು. ಆದರೆ ಮಾವೋವಾದಿಗಳ ಕಾಲದಲ್ಲಿ ಜನರು ಕಂಡದ್ದು ಆಂತರಿಕ ಜಗಳ, ಒಡಕು ಮತ್ತು ಅಸ್ಥಿರತೆಯನ್ನಷ್ಟೇ.
ಆ ಬಳಿಕ 2015ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ (ಸಿಪಿಎಂ-ಯುಎಂಎಲ್)ನ ಮುಖ್ಯಸ್ಥ ಕೆಪಿ ಶರ್ಮಾ ಓಲಿ ಪ್ರಧಾನಿಯಾಗಲು ಮಾವೋವಾದಿಗಳು ಸಹಾಯ ಮಾಡಿದ್ದರು. ಆದರೆ ಇದು ಅಲ್ಪಕಾಲಿಕವಾಗಿತ್ತು. ಮಾವೋವಾದಿಗಳು ಕೆಲವೇ ಸಮಯದಲ್ಲಿ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡರು.  ಆಗ ಅಧಿಕಾರಕ್ಕೆ ಬಂದದ್ದು ಪ್ರಚಂಡ ಎಂದು ಕರೆಯಲ್ಪಡುವ ಪುಷ್ಪ ಕಮಲ್ ದಹಲ್. ಕಮಲ್‌ ಚೀನಾದ ಜೊತೆ ಸೇರಿ ಏನೇ ಕಮಾಲ್‌ ಮಾಡಲೂ ಯತ್ನಿಸಿದರೂ ಆ ಸರ್ಕಾರವೂ ಉಳಿಯಲಿಲ್ಲ. ಬಳಿಕ ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದ್ದೂರ್ ದೇವುಬಾ ಪ್ರಧಾನಿಯಾದರು. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ ಮಾವೋವಾದಿ ಕೇಂದ್ರದ ನಂತರ ಓಲಿ ಮತ್ತೊಮ್ಮೆ 2017 ರಲ್ಲಿ ಪ್ರಧಾನ ಮಂತ್ರಿಯಾದರು ಮತ್ತು ಸಿಪಿಎಂ-ಯುಎಂಎಲ್ ಘನ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡರು. ಏಕೀಕೃತ ನೇಪಾಳ ಕಮ್ಯುನಿಸ್ಟ್ ಪಕ್ಷವು ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಭರ್ಜರಿ ಜಯ ಸಾಧಿಸಿತು. ಆದರೆ ಅದು ಪೂರ್ಣಾವಧಿಯವರೆಗೂ ಉಳಿಯಲಿಲ್ಲ. ಅಧಿಕಾರ ರಾಜಕಾರಣಕ್ಕೆ ಬಂದಾಗ ಮಾವೋವಾದಿಗಳು ಉಳಿದ ಕಚ್ಚಾ ರಾಜಕಾರಣಿಗಳಿಗಿಂತ ಭಿನ್ನವೆನಲ್ಲ ಎಂಬುದನ್ನ ನೇಪಾಳದ ಜನರು ಅರಿತುಕೊಂಡರು.

ನೇಪಾಳದಲ್ಲಿ ಉತ್ತಮ ಆಡಳಿತ ನೀಡಲು ಕಮ್ಯುನಿಸ್ಟರು ವಿಫಲರಾಗಿದ್ಹೇಗೆ?

ಕಳೆದ ಕೆಲವು ದಶಕಗಳಲ್ಲಿ ಜಗತ್ತು ನಾಟಕೀಯವಾಗಿ ಬದಲಾಗಿದೆ ಮತ್ತು ಹೊಸ ತಂತ್ರಜ್ಞಾನ ಮತ್ತು ಜನರ ಹೆಚ್ಚುತ್ತಿರುವ ನಿರೀಕ್ಷೆಗಳಿಂದ ತಂದ ರೂಪಾಂತರವನ್ನು ನಿಭಾಯಿಸಲು ಸಂಪ್ರದಾಯಿಕ ಸಿದ್ಧಾಂತಗಳನ್ನು ಅನುಸರಿಸುವ ಎಡಪಂಥೀಯರಿಗೆ ಸಾಧ್ಯವಾಗಲಿಲ್ಲ. ಪ್ರಚಂಡ ಜೊತೆಗೂಡಿ ನೇಪಾಳ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದ ಮಾವೋವಾದಿ ದಂಗೆಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಬಾಬುರಾಮ್ ಭಟ್ಟರ ಪ್ರಕಾರ, ಹಳೆಯ ಶೈಲಿಯ ಪಠ್ಯಪುಸ್ತಕವನ್ನು ಓದುವ ಕಮ್ಯುನಿಸಂಗೆ ಜಗತ್ತಿನಲ್ಲಿ ಆಗಿರುವ ವ್ಯಾಪಕ ಬದಲಾವಣೆಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ಅವರ ವೈಫಲ್ಯಗಳು ಕಳೆದೆರಡು ದಶಕಗಳಿಂದ ಮುಂದುವರಿದಿದೆ. ನೇಪಾಳದಲ್ಲಿ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ದೃಷ್ಟಿಕೋನಗಳ ಕೊರತೆ ಮತ್ತು ಪರಿಸರ ಕಾಳಜಿಗಳು ಈಗ ಪ್ರಮುಖ ಸಮಸ್ಯೆಗಳಾಗಿದ್ದು, ಈ ಪ್ರಮುಖ ಸಮಸ್ಯೆಗಳ ಸುತ್ತ ಜನಾಂದೋಲನಗಳು ಹುಟ್ಟಿಕೊಳ್ಳುತ್ತಿವೆ. ಸಾಂಪ್ರದಾಯಿಕ ಎಡಪಂಥೀಯರಿಗೆ ಅದನ್ನು ಅರೈಸಿಕೊಳ್ಳಲು ಸಾಧ್ಯವಾಗಿಲ್ಲ. ಬದಲಾವಣೆಗೆ ಹೊಂದಿಕೊಂಡರಷ್ಟೇ ಎಡಪಕ್ಷಗಳಿಗೆ ಬವಿಷ್ಯ ಎನ್ನುತ್ತಾರೆ ಭಟ್ಟರು.
ಎಡಪಂಥೀಯರು ತನ್ನ ಕಾರ್ಯತಂತ್ರವನ್ನು ಬದಲಾಯಿಸಬೇಕಾಗಿದೆ. ಸಾಂಪ್ರದಾಯಿಕ ರೀತಿಯ ಜನಾಂದೋಲನಗಳು ಇನ್ನು ಮುಂದೆ ಜನಸಾಮಾನ್ಯರನ್ನು ಸೆಳೆಯುವುದಿಲ್ಲ. ನಾವು ನೆಲದ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಮತ್ತು ಹೆಚ್ಚು ಸಮಾಜವಾದಿ ಮತ್ತು ಪ್ರಜಾಪ್ರಭುತ್ವದ ತಿರುಳುಗಳನ್ನು ಆರಿಸಿಕೊಳ್ಳಬೇಕು. ಉದಾರವಾದ, ಪ್ರಗತಿಪರ ಪ್ರಜಾಪ್ರಭುತ್ವವು ಬದಲಾಗುತ್ತಿರುವ ಪರಿಸ್ಥಿತಿಗೆ ಸೂಕ್ತವಾಗಿದೆ. ನೇಪಾಳಕ್ಕೂ ಈಗ ಅದೇ ಅಗತ್ಯ ಎನ್ನುತ್ತಾರೆ ಭಟ್.
ಸದ್ಯ, ನೇಪಾಳದಲ್ಲಿ ಮತ್ತೊಂದು ಚುನಾವನೆ ನಡೆಯುತ್ತಿದೆ. ಅಲ್ಲಿನ 76ರ ಹರೆಯದ ಪ್ರಧಾನಿ ದೇವುಬಾ ನೇತೃತ್ವದ ನೇಪಾಳಿ ಕಾಂಗ್ರೆಸ್,  ಮಾಜಿ ಮಾವೋವಾದಿ ಗೆರಿಲ್ಲಾ ನಾಯಕ ‘ಪ್ರಚಂಡ, ಕೆಪಿ ಓಲಿ ಸೇರಿದಂತೆ ಹಲವರು ಪ್ರಧಾನಿ ಹುದ್ದೆಗೆ ಸ್ಪರ್ಧೆಯಲ್ಲಿದ್ದಾರೆ. ಯಾರೇ ಗೆಲ್ಲಲಿ ಮುಂದಿನ ಸರ್ಕಾರವು ಸ್ಥಿರವಾದ ರಾಜಕೀಯ- ಆಡಳಿತ ನಡೆಸುವುದು, ಪ್ರವಾಸೋದ್ಯಮ ಪುನರುಜ್ಜೀವನಗೊಳಿಸುವುದು ಮತ್ತು ನೆರೆಹೊರೆಯ ದೇಶಗಳೊಂದಿಗೆ ಸಂಬಂಧವನ್ನು ಸಮತೋಲನಗೊಳಿಸುವ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಿಂದೆ ಮಾವೋವಾದಿಗಳ ಆಡಳಿತ ವೈಖರಿಯಿಂದ ಪಾಠ ಕಲಿತಿರುವ ಜನರು ಸ್ಥಿರವಾದ ಸರ್ಕಾರ ರಚಿಸುವ ಅರ್ಹನಾಯಕನಿಗೆ ಮತ ಹಾಕುವ ಆಲೋಚನೆಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!