ಹೊಸದಿಗಂತ ವರದಿ, ಕೊಡಗು:
ದಕ್ಷಿಣ ಕೊಡಗಿನಲ್ಲಿ ಜನ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹುಲಿಯನ್ನು ಸದ್ಯದಲ್ಲೇ ಸೆರೆ ಹಿಡಿಯಲಾಗುವುದು ಎಂದು ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಗೋಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಇತ್ತೀಚೆಗೆ ಸೆರೆ ಹಿಡಿಯಲಾದ ಹುಲಿ ನರಹಂತಕ ಹುಲಿಯಲ್ಲ. ಆದರೆ ಅಲ್ಲಲ್ಲಿ ನಡೆದ ಜಾನುವಾರು ಹತ್ಯೆ ಪ್ರಕರಣಗಳಲ್ಲಿ ಈ ಹುಲಿಯ ಪಾತ್ರವಿದೆ ಎಂದೂ ಅವರು ಹೇಳಿದ್ದಾರೆ.
ಇತ್ತೀಚೆಗೆ ಸೆರೆ ಹಿಡಿಯಲಾದ ಹುಲಿ ಹೆಣ್ಣು ಹುಲಿಯಾಗಿದ್ದು, ನರ ಹತ್ಯೆ ಮಾಡಿರುವ ಹುಲಿ ಗಂಡು ಹುಲಿ ಎಂಬುದು ಅನುವಂಶಿಕ ಮ್ಯಾಪಿಂಗ್ ಪರೀಕ್ಷೆಯಲ್ಲಿ ದೃಢಪಟ್ಟರುವುದಾಗಿ ಅವರು ವಿವರಿಸಿದ್ದಾರೆ.
ಫೆ.20 ಹಾಗೂ 21ರಂದು ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಹಾಗೂ ಕುಮಟೂರಿನಲ್ಲಿ ಹುಲಿಗೆ ಬಲಿಯಾದ ಇಬ್ಬರು ಹಾಗೂ ಮಾ.8ರಂದು ಬೆಳ್ಳೂರಿನಲ್ಲಿ ಬಲಿಯಾದ ಬಾಲಕನ ಶವದ ಮೇಲಿದ್ದ ಹುಲಿಯ ಕೂದಲುಗಳನ್ನು ಹೈದರಾಬಾದ್ ನಲ್ಲಿರುವ ‘ಸೆಲ್ಯುಲಾರ್ -ಮಾಲ್ಕುಲರ್ ಬಯಾಲಜಿ ಸೆಂಟರ್’ಗೆ ಕಳುಹಿಸಲಾಗಿದ್ದು, ಪ್ರಯೋಗಾಲಯದಲ್ಲಿ ಅನುವಂಶಿಕ ಮ್ಯಾಪಿಂಗ್ ಪರೀಕ್ಷೆ ಬಳಿಕ ಈ ಮೂವರನ್ನು ಬಲಿ ತೆಗೆದುಕೊಂಡಿರುವದು ಒಂದೇ ಗಂಡು ಹುಲಿ ಎಂದು ಖಾತರಿಯಾಗಿದೆ.
ಈ ವ್ಯಾಘ್ರ 2013ರಿಂದಲೇ ಅರಣ್ಯ ಇಲಾಖೆಯ ಸಿ.ಸಿ.ಟಿ.ವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು,ಈ ಹಿಂದೆ ದಕ್ಷಿಣ ಕೊಡಗಿನ ಅನೇಕ ಕಡೆಗಳಲ್ಲಿ ಹಸುಗಳನ್ನು ಹತ್ಯೆಗೈದಿದೆ. ಆ ಪ್ರದೇಶಗಳಲ್ಲಿರಿಸಿದ ಕ್ಯಾಮರಾಗಳಲ್ಲಿಯೂ ಇದೇ ಗಂಡು ಹುಲಿಯ ಚಿತ್ರ- ವೀಡಿಯೋ ಸೆರೆಯಾಗಿದೆ. ಅದೇ ರೀತಿ ಇತ್ತೀಚೆಗೆ ಕಾರ್ಯಾಚರಣೆಯಲ್ಲಿ ಸೆರೆಯಾದ ಹೆಣ್ಣು ಹುಲಿಯು ಕಳೆದ 2012 ರಿಂದಲೇ ಇಲಾಖಾ ಕ್ಯಾಮರಾದಲ್ಲಿ ಸೆರೆಯಾಗಿದೆ. ಅನೇಕ ಹಸು ಹತ್ಯೆ ಪ್ರಕರಣಗಳಲ್ಲಿ ಈ ಹುಲಿ ಕೂಡ ಅಲ್ಲಲ್ಲಿ ಇರಿಸಿದ್ದ ಕ್ಯಾಮರಾಗಳಲ್ಲಿ ಕಾಣಿಸಿಕೊಂಡಿದೆ. ಆದರೆ, ಈ ಹುಲಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು ಮಾನವ ಹತ್ಯೆಯಲ್ಲಿ ಈ ಹೆಣ್ಣು ಹುಲಿಯ ಪಾತ್ರವಿಲ್ಲ ಎಂಬದು ಖಚಿತಗೊಂಡಿದೆ ಎಂದು ಗೋಗಿ ವಿವರಿಸಿದ್ದಾರೆ.
ನಾಲ್ಕೇರಿಯಲ್ಲಿ ಕರುವೊಂದು ಹುಲಿಗೆ ಬಲಿಯಾದ ಕುರಿತು ಪ್ರಶ್ನಿಸಿದಾಗ ಇನ್ನೂ ಎರಡು ಹುಲಿಗಳಿರಬಹುದೆಂದು ಶಂಕೆ ವ್ಯಕ್ತಪಡಿಸಿದರಲ್ಲದೆ,
ಈಗಾಗಲೇ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಪರಿಣಿತರಿದ್ದು, ಈ ಹಿಂದೆ ಬಂಡಿಪುರ ವಿಭಾಗದಲ್ಲಿ ಅನೇಕ ಹುಲಿಗಳನ್ನು ಈ ತಂಡದವರು ಹಿಡಿದಿದ್ದಾರೆ. ಸದ್ಯದಲ್ಲಿಯೇ ಹುಲಿ ಸೆರೆಯಾಗುವ ವಿಶ್ವ್ವಾಸವಿದ್ದು ಇಡೀ ಅರಣ್ಯ ಇಲಾಖೆ ಸ್ಥಳೀಯ ಜನರೊಂದಿಗಿರುತ್ತದೆ ಎಂದು ಹೇಳಿದ್ದಾರೆ.
ಮುಂದುವರಿದ ಪ್ರತಿಭಟನೆ: ನರಹಂತಕ ಹುಲಿಯನ್ನು ಸೆರೆ ಹಿಡಿಯುವಂತೆ ಇಲ್ಲವೇ ಗುಂಡಿಕ್ಕುವಂತೆ ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬೆಳ್ಳೂರಿನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿದಿದೆ.
ಹುಲಿಯ ಅಟ್ಟಹಾಸ ನಿಗ್ರಹಕ್ಕೆ ಅರಣ್ಯ ಇಲಾಖೆ ವಿಫಲವಾದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.