Saturday, July 2, 2022

Latest Posts

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆಗೆ ಮತ್ತೊಂದು ಲ್ಯಾಬ್: ಸಚಿವ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ, ಉಡುಪಿ:

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ಮಾಡುವ ಮತ್ತೊಂದು ಲ್ಯಾಬ್ ಆರಂಭಿಸುವುದಾಗಿ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿ ಅವರು, ಉಡುಪಿಯಲ್ಲಿ ಪ್ರತಿದಿನ 600ಕ್ಕೂ ಅಧಿಕ ಪಾಸಿಟಿವ್ ಕೇಸ್ ಬರುತ್ತಿವೆ, ಹಾಗಾಗಿ ಲ್ಯಾಬ್ ಗೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ಜಿಲ್ಲೆಗೆ ಸರಕಾರದ ಏಕೈಕ ಲ್ಯಾಬ್ ಇರುವುದರಿಂದ ಸದ್ಯ ಪೂಲಿಂಗ್ ಮಾಡಿಕೊಂಡು ಪ್ರತೀದಿನ 3000 ಪರೀಕ್ಷೆ ಮಾಡಿಸುತ್ತಿದ್ದೇವೆ. ಇನ್ನು ಮುಂದೆ ಒಂದುವರೆ ಸಾವಿರ ಹೆಚ್ಚುವರಿ ಪರೀಕ್ಷೆ ಮಾಡಿಸುವ ಇರಾದೆ ಇದೆ. ಇದಕ್ಕಾಗಿ ಸೂಕ್ತ ಲ್ಯಾಬ್ ವ್ಯವಸ್ಥೆ ಮಾಡಲಾಗುವುದು. ಸ್ವತಂತ್ರವಾಗಿ ಸರಕಾರಿ ಆಸ್ಪತ್ರೆಯಲ್ಲಿ 3000 ಪರೀಕ್ಷೆ ಮಾಡಲು ವ್ಯವಸ್ಥೆಗೊಳಿಸಲಾಗುವುದು ಎಂದರು.
ಉಡುಪಿಯಲ್ಲಿ ಸದ್ಯ ಹಾಸಿಗೆಗಳ ಕೊರತೆಯಿಲ್ಲ. ಆರ್ಟಿಪಿಸಿಆರ್ ನೆಗೆಟಿವ್ ಬಂದರೂ ಉಸಿರಾಟದ ತೊಂದರೆ ಕಂಡುಬರುತ್ತಿದೆ. ಹಾಗಾಗಿ ಬರುವಂತಹ ದಿನಗಳಲ್ಲಿ ಕೋವಿಡ್ ಮತ್ತು ಸಾರಿ (ತೀವ್ರ ಉಸಿರಾಟದ ಸಮಸ್ಯೆ) ಕೇಸ್ ಹೆಚ್ಚಾಗುವ ಸಾಧ್ಯತೆ ಇದೆ. ಇದರ ನಿರ್ವಹಣೆಗೆ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 25 ಆಕ್ಸಿಜನ್ ಬೆಡ್ ಹೆಚ್ಚಿಸುತ್ತೇವೆ. ಕೋವಿಡ್ ಮತ್ತು ಸಾರಿ ಕೇಸುಗಳಿಗೆ ಪ್ರತ್ಯೇಕ ಬೆಡ್ ಮೀಸಲಿರಿಸುತ್ತೇವೆ ಎಂದರು.
ಜನರ ಬೇಡಿಕೆ ಒತ್ತಾಯದ ಮೇರೆಗೆ ಪರಿಷ್ಕೃತ ಆದೇಶ ಮಾಡಿದ್ದೇವೆ. ದಿನಸಿ, ತರಕಾರಿ ಮಾರಾಟಕ್ಕೆ ಹೆಚ್ಚುವರಿ ಸಮಯ ನಿಗದಿ ಮಾಡಿದ್ದೇವೆ. ಈವರೆಗೆ ತರಕಾರಿ, ದಿನಸಿ ಖರೀದಿಗೆ ಸಮಯ ಸಾಲುತ್ತಿರಲಿಲ್ಲ. ಸೀಮಿತ ಸಮಯಾವಕಾಶ ಜನಸಂದಣಿ ಹೆಚ್ಚಾಗಲು ಕಾರಣವಾಯಿತು. ಜನಸಂದಣಿ ತಪ್ಪಿಸಬೇಕು ಎನ್ನುವುದು ನಮ್ಮ ಉದ್ದೇಶ, ಜನ ಸೇರುವುದನ್ನು ಕಡಿಮೆ ಮಾಡಲು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದೇ ವೇಳೆ ರೆಮ್ಡಿಸಿವರ್ ಕಾಳಸಂತೆಯಲ್ಲಿ ಮಾರಾಟ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಹೆಚ್ಚಿನ ರೀತಿಯಲ್ಲಿ ನಿಗಾವಹಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss