Wednesday, June 29, 2022

Latest Posts

ನೂತನ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ವಾರದೊಳಗೆ ಜಮೀನು ಗುರುತಿಸಿ: ಅಧಿಕಾರಿಗಳಿಗೆ ಸಚಿವ ಡಾ.ನಾರಾಯಣ ಗೌಡ ಸೂಚನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಹಾವೇರಿ:

ಹಾವೇರಿ ಜಿಲ್ಲೆಯಲ್ಲಿ ನೂತನ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಒಂದು ವಾರದೊಳಗಾಗಿ ಜಮೀನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಯುವ ಸಬಲೀಕರಣ ಮತ್ತು ರೇಷ್ಮೆ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಹಾವೇರಿ ಜಿಲ್ಲೆಯಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ತೀರ್ಮಾನಿಸಲಾಗಿದೆ. ವಾರದೊಳಗೆ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಸರ್ವೆ ಮಾಡಿ ವರದಿ ನೀಡಿದರೆ ತಕ್ಷಣವೇ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಹಾವೇರಿಯಲ್ಲಿ ರೇಷ್ಮೆ ಬೆಳೆ ಉತ್ತಮವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಾಗಬೇಕು. ಈ ಹಿನ್ನೆಲೆಯಲ್ಲಿ ರೇಷ್ಮೆ ತರಬೇತಿ ಕೇಂದ್ರ ಅಗತ್ಯವಿದ್ದು, ಶೀಘ್ರವೇ ಈ ಸಂಬಂಧ ಕ್ರಮ ವಹಿಸುವುದಾಗಿ ಹೇಳಿದರು.
ಲಂಚಪಡೆದರೆ ಅಮಾನತು
ರೇಷ್ಮೆ ಬೆಳೆಗಾರರಿಂದ ರೇಷ್ಮೆ ಸಾಕಾಣಿಕೆ ಮನೆಗಳ ಮಂಜೂರಾತಿ, ರೇಷ್ಮೆ ಬೆಳೆ ಹನಿನೀರಾವರಿ ಸೌಕರ್ಯ ಮಂಜೂರಾತಿ ಹಾಗೂ ಅನುದಾನ ಬಿಡುಗಡೆ ಕೆಲ ಅಧಿಕಾರಿಗಳು ಶೇಕಡವಾರು ಪ್ರಮಾಣದಲ್ಲಿ ಲಂಚ ಕೇಳುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣಹಾಕಬೇಕು. ಈ ಪ್ರವೃತ್ತಿ ಮುಂದುವರೆಸಿ ರೈತರಿಂದ ಲಂಚ ಕೇಳುವ ಅಧಿಕಾರಿಗಳನ್ನು ಅಮಾನತ್‌ಗೊಳಿಸಲಾಗುವುದು. ರೈತರ ರಕ್ತ ಕುಡಿಯುವ ಅಧಿಕಾರಿಗಳನ್ನು ಬಿಡಲ್ಲ. ರೈತರಿಗೆ ಸಂಬಂಧಿಸಿದ ಯಾವುದೇ ಯೋಜನೆ ಅನುದಾನ ರೈತರ ಖಾತೆಗೆ ನೇರವಾಗಿ ಜಮಾಮಾಡಬೇಕು ಎಂದು ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
೦% ಇ-ಪೇಮೆಂಟ್‌ಗೆ ಸಚಿವರು ಗರಂ
ರಾಜ್ಯದ ಎಲ್ಲ ರೇಷ್ಮೆ ಮಾರುಕಟ್ಟೆಯಲ್ಲಿ 100% ಇ-ಪೇಮೆಂಟ್ ಆಗಬೇಕು ಎಂದು ಸೂಚನೆ ನೀಡಲಾಗಿದೆ. ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಾದರೂ ನಡೆಯುತ್ತಿದೆ. ಆದರೆ ಹಾವೇರಿ ರೇಷ್ಮೆ ಮಾರುಕಟ್ಟೆಯಲ್ಲಿ ೦% ಇ-ಪೇಮೆಂಟ್ ಇದೆ. ಆನ್‌ಲೈನ್ ಪೇಮೆಂಟ್ ಆರಂಭ ಮಾಡಲೇ ಇಲ್ಲ. ಸಿಲ್ಕು ಮತ್ತು ಮಿಲ್ಕು ರೈತರ ಜೀವನಾಧಾರ. ಇದರಲ್ಲಿ ಅನ್ಯಾಯವಾಗಬಾರದು. ಮಾರುಕಟ್ಟೆಯಲ್ಲಿ ನಗದು ವ್ಯವಹಾರ ನಿಲ್ಲಬೇಕು. ತಕ್ಷಣ ಇ-ಪೇಮೆಂಟ್ ಪ್ರಾರಂಭಿಸಬೇಕು. ಮಾರುಕಟ್ಟೆಯಲ್ಲಿ ಸಿಸಿಕ್ಯಾಮರಾ ಅಳವಡಿಸಬೇಕು. ರೈತರಿಗೆ ಆಗುತ್ತಿರುವ ಅನ್ಯಾಯ ನಿಲ್ಲಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಮಾರುಕಟ್ಟೆ ವಿಸ್ತರಣೆ
ಮೈಸೂರು ರೇಷ್ಮೆಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ರೇಷ್ಮೆ ಸೀರೆ ಉತ್ಪಾದನೆಯನ್ನು ಒಂದು ಲಕ್ಷದಿಂದ ಮೂರು ಲಕ್ಷ ಸೀರೆಗಳ ನೇಯ್ಗೆಗೆ ವ್ಯವಸ್ಥೆ ಮಾಡಲಾಗಿದೆ. ದೇಶವಿದೇಶಗಳ ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಸೀರೆ ಮಾರಾಟ ಹಾಗೂ ಉಡುಪುಗಳ ಮಾರಾಟದ ಮಳಿಗೆಗಳನ್ನು ತೆರೆಯಲು ಚಿಂತಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರ ಮನವಿಯ ಮೇರೆಗೆ ಜಿಲ್ಲಾ ಕ್ರೀಡಾ ಶಾಲೆಯ ಪ್ರವೇಶ ಸಾಮರ್ಥ್ಯವನ್ನು ೫೦ ರಿಂದ ೭೫ಕ್ಕೆ ಹೆಚ್ಚಳ ಮಾಡುವ ಭರವಸೆ ನೀಡಿದರು. ಪ್ರಸ್ತುತ ಜಿಲ್ಲಾ ಕ್ರೀಡಾ ಶಾಲೆಯಲ್ಲಿ ಕೇವಲ ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದ್ದು, ಕನಿಷ್ಠ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿರುವ ಕ್ರೀಡಾ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ ಕಲ್ಪಿಸಲು ಶೀಘ್ರವೇ ಆದೇಶ ಹೊರಡಿಸಲಾಗುವುದು. ಕ್ರೀಡಾ ಅಧಿಕಾರಿ ಸೇರಿದಂತೆ ಅಗತ್ಯ ಸಿಬ್ಬಂದಿಗಳು ಹಾಗೂ ತರಬೇತಿದಾರರನ್ನು ನೇಮಕಮಾಡಲು ಕ್ರಮವಹಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಶಾಸಕ ನೆಹರು ಓಲೇಕಾರ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಜಂಟಿ ನಿರ್ದೇಶಕ ಎನ್.ಡಿ.ನಾಯಕ್, ಉಪನಿರ್ದೇಶಕ ಮಲ್ಲಿಕಾರ್ಜುನಯ್ಯ, ಕ್ರೀಡಾ ಇಲಾಖೆಯ ಉಪನಿರ್ದೇಶಕ ಎಂ.ಸಿ.ರಮೇಶ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss