ಹೊಸದಿಗಂತ ವರದಿ. ಚಿತ್ರದುರ್ಗ:
ದಾವಣಗೆರೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಹೆಚ್ಚು ಪ್ರವಾಸ ಮಾಡಿ ಜನಪರವಾಗಿ ಕಾರ್ಯನಿರ್ವಹಿಸುವಂತೆ ನೂತನ ವಿಧಾನ ಪರಿಷತ್ ಕೆ.ಎಸ್.ನವೀನರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಕರ್ನಾಟಕ ವಿಧಾನ ಪರಿಷತ್ಗೆ ಚಿತ್ರದುರ್ಗ – ದಾವಣಗೆರೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ನೂತನವಾಗಿ ಆಯ್ಕೆಯಾದ ಕೆ.ಎಸ್.ನವೀನ್ ಅವರು ಶುಕ್ರವಾರ ಬೆಳಗಾವಿಯ ಅಧಿವೇಶನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಮರ್ಪಿಸಿ ಮಾರ್ಗದರ್ಶನ ಪಡೆದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಚಿತ್ರದುರ್ಗ – ದಾವಣಗೆರೆ ಸ್ಥಳೀಯ ಸಂಸ್ಥೆಯ ಕ್ಷೇತ್ರದಲ್ಲಿ ಜನಬಲದ ಮೂಲಕ ಗೆಲವು ಸಾಧಿಸಿದ್ದೀರ. ಕಾಂಗ್ರೆಸ್ ವಾಮಮಾರ್ಗದ ಮೂಲಕ ಹಣ ಹಂಚಿ ಗೆಲವು ಪಡೆಯಲು ಎಲ್ಲಾ ಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್ ಮಾಡಿ ಹಣ ಮಾಡಿದಂತಹವರಿಗೆ ಟಿಕೆಟ್ ನೀಡಿ ಗೆಲವು ಪಡೆಯಲು ಯತ್ನಿಸಿ ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದೆ ಎಂದು ಟೀಕಿಸಿದರು.
ಚಿತ್ರದುರ್ಗ – ದಾವಣಗೆರೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವಲ್ಲಿ ಕ್ಷೇತ್ರದ ಶಾಸಕರ ಪಾತ್ರ ದೊಡ್ಡಮಟ್ಟದಲ್ಲಿದೆ. ಪಕ್ಷದ ಸಂಘಟನೆ, ಕಾರ್ಯಕರ್ತರ ಶ್ರಮದಿಂದ ಗೆಲವು ಲಭಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು, ಬೈರತಿ ಬಸವರಾಜ್, ಶಾಸಕರುಗಳಾದ ಎಂ.ಚಂದ್ರಪ್ಪ, ಜಿ.ಹೆಚ್.ತಿಪ್ಪಾರೆಡ್ಡಿ, ಪೂರ್ಣಿಮಾ ಕೆ.ಶ್ರೀನಿವಾಸ್, ಗೂಳಿಹಟ್ಟಿ ಡಿ.ಶೇಖರ್ ಸೇರಿದಂತೆ ಪ್ರಮುಖರು ಇದ್ದರು.
ನಂತರ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನಿವಾಸಕ್ಕೆ ತೆರಳಿ ಧನ್ಯವಾದ ಸಮರ್ಪಿಸಿ, ವಿಕಾಸ ಸೌಧದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಜಗಳೂರು ಶಾಸಕ ಎಸ್.ವಿ.ರಾಮಚಂದ್ರ, ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಅವರನ್ನು ವಿಕಾಸಸೌಧದಲ್ಲಿ ಭೇಟಿ ಮಾಡಿ ಗೆಲುವಿಗೆ ಸಹಕರಿಸಿದಕ್ಕಾಗಿ ಧನ್ಯವಾದ ಅರ್ಪಿಸಿದರು.
ಬೆಳಗಾವಿಗೆ ಪ್ರಯಾಣ ಬೆಳೆಸುವ ಮಾರ್ಗಮಧ್ಯೆದಲ್ಲಿ ದಾವಣಗೆರೆ ಸಮೀಪದ ಶ್ಯಾಮನೂರಿನಲ್ಲಿ ಈಶ್ವರ ದೇವಸ್ಥಾನಕ್ಕೆ ಭೇಟಿ ಆಶೀರ್ವಾದ ಪಡೆದರು. ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷರಾದ ವಿರೇಶ ಹನಗವಾಡಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು, ಶ್ಯಾಮನೂರು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು.
ಚಿತ್ರದುರ್ಗ ಜಿಲ್ಲಾಧ್ಯಕ್ಷ ಎ.ಮರುಳಿ, ಜಿಲ್ಲಾ ಸಂಚಾಲಕ ಜಿ.ಎಸ್.ಅನಿತ್ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಯಪಾಲ್, ರಾಜೇಶ ಬುರುಡೆಕಟ್ಟೆ, ಸುರೇಶ್ ಸಿದ್ದಾಪುರ, ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಜಿಲ್ಲೆಯ ಪದಾಧಿಕಾರಿಗಳಾದ ಶಿವಣ್ಣಾಚಾರ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಸಂಪತ್ಕುಮಾರ್, ಎಚ್.ಬಿ.ನರೇಂದ್ರ, ವೆಂಕಟೇಶ್ ಯಾದವ್, ಕಲ್ಲೇಶಯ್ಯ, ಮಂಡಲ ಅಧ್ಯಕ್ಷ ನಂದಿ ನಾಗರಾಜ್, ಜಗದೀಶ್, ವಿಶ್ವನಾಥ್, ಸಿದ್ದೇಶ್, ಸಂತೋಷ್ ಸೇರಿದಂತೆ ಮತ್ತಿತರರು ಹಾಜರಿದ್ದರು.