ಕಾಂಬೋಡಿಯದ ಭಾರತ ಮೂಲಕ್ಕೆ ಪುರಾವೆ ಕೊಡುವ ಹೊಸ ಸಂಶೋಧನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಬೋಡಿಯದಲ್ಲಿ ಸನಾತನ ಹಿಂದು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಾಚೀನ ದೇವಾಲಯಗಳಿರುವುದು, ಒಂದೊಮ್ಮೆ ಭಾರತದ ಪ್ರಭಾವಕ್ಕೆ ಅದು ಒಳಗಾಗಿತ್ತು ಎಂಬುದೆಲ್ಲ ಈಗಾಗಲೇ ಬೆಳಕಿಗೆ ಬಂದಿರುವ ಅಂಶಗಳೇ. ಆದರೆ ಇವತ್ತಿನ ಕಾಂಬೋಡಿಯ ಜನರು ಮುಖಭಾವದಲ್ಲಿ ಭಾರತೀಯರನ್ನು ಅಷ್ಟಾಗಿ ಹೋಲುವುದಿಲ್ಲವಾದ್ದರಿಂದ, ಭಾರತದ ಪ್ರಭಾವ ನಿಜಕ್ಕೂ ಯಾವ ರೀತಿಯಲ್ಲಾಗಿತ್ತು ಎಂಬುದರ ಬಗ್ಗೆ ನಾನಾ ಬಗೆಯ ವಾದಗಳಿವೆ.
ಆದರೆ, ಇದೀಗ ವೈಜ್ಞಾನಿಕ ಸಂಶೋಧನೆಯೊಂದು ಕಾಂಬೋಡಿಯದಲ್ಲಿ ಸಾಮ್ರಾಜ್ಯ ಎದ್ದಿದ್ದರ ಹಿಂದೆ ಭಾರತೀಯ ಮೂಲ ಕೆಲಸ ಮಾಡಿದೆ ಎಂಬಂಶವನ್ನು ಮತ್ತಷ್ಟು ಬಲಪಡಿಸುತ್ತಿದೆ. ವಿಜ್ಞಾನದ ಸಂಶೋಧನೆಗಳಿಗೆಂದೇ ಮೀಸಲಾಗಿರುವ ಜಾಗತಿಕ ಹಿರಿಮೆಯುಳ್ಳ ನೇಚರ್ ನಿಯತಕಾಲಿಕದಲ್ಲಿ ಡಿಸೆಂಬರ್ 29, 2022ರಂದು ಪ್ರಕಟವಾಗಿರುವ ಲೇಖನ ಕೆಲವು ಆಸಕ್ತಿಕರ ಅಂಶಗಳನ್ನು ಸಾರಿದೆ.
ಆ ಅಧ್ಯಯನದ ತಿರುಳನ್ನು ಸಾರಸಂಗ್ರಹ ರೂಪದಲ್ಲಿ ಹೇಳಬಹುದಾಗಿದ್ದಿಷ್ಟು- “ಕಾಂಬೋಡಿಯದ ವಾಟ್ ಕೊಮ್ನೌ ಎಂಬ ರುದ್ರಭೂಮಿಯ ಎಲುಬುಗಳ ಅವಶೇಷವನ್ನು ರೆಡಿಯೊ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಿದಾಗ ಅದು ಕಾಂಬೋಡಿಯದ ಪ್ರಥಮ ಸಾಮ್ರಾಜ್ಯ ಫುನಾನ್ ಅವಧಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಅಲ್ಲಿನ ವಂಶವಾಹಿಯು ದಕ್ಷಿಣ ಏಷ್ಯದ ಡಿ ಎನ್ ಎ ಮಾದರಿಗೆ ಸಾಮ್ಯ ಹೊಂದಿದೆ. ಈ ಹಿಂದಿನ ಅಧ್ಯಯನಗಳು ಕಾಂಬೋಡಿಯದ ಸ್ಥಳೀಯ ಜನಸಂಖ್ಯೆ ಜತೆ ದಕ್ಷಿಣ ಏಷ್ಯದ ಜನ ಯಾವಾಗ ಬೆರೆತುಕೊಂಡರು ಎಂದು ಗುರುತಿಸಲಾಗಿತ್ತೋ ಅದಕ್ಕಿಂತ ಶತಮಾನಗಳಷ್ಟು ಹಿಂದೆಯೇ ಆ ಬಗೆಯ ಬೆರಕೆ ಅಥವಾ ಮಿಳಿತ ಆಗಿತ್ತು ಎಂಬುದನ್ನು ಈಗಿನ ಹೊಸ ಅಧ್ಯಯನ ತೋರಿಸುತ್ತದೆ. ಕಾಂಬೋಡಿಯನ್ನರ ಈ ದಕ್ಷಿಣ ಏಷ್ಯ ವಂಶವಾಹಿಯ ಮೂಲವು ಭಾರತದ ದಕ್ಷಿಣ ಭಾಗಕ್ಕೆ ಸಂಬಂಧಿಸಿದ್ದಿರಬಹುದೆಂಬುದಕ್ಕೆ ಹಲವು ಅಂಶಗಳು ಪೂರಕವಾಗಿವೆ.”
ಇದರ ದೀರ್ಘ ಅವತರಣಿಕೆಯನ್ನು ಆಸಕ್ತರು ನೇಚರ್ ಲೇಖನದಲ್ಲಿ ಗಮನಿಸಬಹುದು.

ಕೌಂಡಿನ್ಯನ ಕತೆ
ಕಾಂಬೋಡಿಯದ ಹೊಸ ಅಧ್ಯಯನಕ್ಕೂ ಭಾರತದ ಕಥಾನಕಗಳು ಸಾರುತ್ತಿರುವುದಕ್ಕೂ ಈಗ ಸಾಮ್ಯ ಬಂದಿದೆ. ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾದ ಫುನಾನ್ ರಾಜವಂಶ, ಭಾರತದಲ್ಲಿ ಪ್ರಚಲಿತವಿರುವ ಕತೆಗಳ ಪ್ರಕಾರ ಒಡಿಶಾದಿಂದ ಹೋದ ಕೌಂಡಿನ್ಯ ಎಂಬಾತ ಅಲ್ಲಿನ ಸ್ಥಳೀಯ ನಾಗಕನ್ಯೆ ಜತೆ ಸೇರಿ ಸ್ಥಾಪಿಸಿದ್ದು.
ಶಾಸ್ತ್ರ ಮತ್ತು ಶಸ್ತ್ರಗಳಲ್ಲಿ ಪರಿಣತನಾಗಿದ್ದ ಕೌಂಡಿನ್ಯ ಯಾವುದೋ ಕಾರಣಕ್ಕೆ ದೇಶಭ್ರಷ್ಟನಾದಾಗ ಆತ ಕೆಲವು ಸಹಚರರೊಂದಿಗೆ ಸಮುದ್ರ ಮಾರ್ಗದಲ್ಲಿ ತೆರಳುತ್ತಾನೆ. ಆತನಿಗೆ ಬಹುದಿನಗಳ ಪ್ರಯಾಣದ ನಂತರ ಇವತ್ತಿನ ಆಧುನಿಕ ಕಾಂಬೋಡಿಯದ ನೆಲ ಸಿಗುತ್ತದೆ. ಅದೊಂದು ದಿನ ಕೌಂಡಿನ್ಯ ನೇತೃತ್ವದಲ್ಲಿ ವ್ಯಾಪಾರಿ ಹಡಗು ಸಾಗುತ್ತಿದ್ದಾಗ ಸೋಮಾ ಎಂಬ ನಾಗ ಸಮುದಾಯದ ಮಹಿಳೆಯಿಂದ ದಾಳಿಯಾಗುತ್ತದೆ. ಅದನ್ನು ರಕ್ಷಿಸುವಲ್ಲಿ ವೀರಾವೇಶದಿಂದ ಹೋರಾಡಿದ ಕೌಂಡಿನ್ಯಗೆ ಮನಸೋತು ಆಕೆ ಈತನನ್ನು ಮದುವೆಯಾಗುತ್ತಾಳೆ. ಇವರಿಬ್ಬರು ಸೇರಿ ಕಾಂಬೋಡಿಯಾದ ಮೊದಲ ಸಾಮ್ರಾಜ್ಯ ಫುನಾನ್ ಅನ್ನು ಸ್ಥಾಪಿಸುತ್ತಾರೆ ಅನ್ನೋದು ದಂತಕತೆ.
ಆಧುನಿಕ ಕಾಂಬೋಡಿಯದಲ್ಲೂ ಇವರ ಸ್ಮೃತಿಗಳು ಜೀವಂತ ಇವೆಯಾದರೂ ಅಲ್ಲಿ ಇವರಿಬ್ಬರನ್ನು ಪ್ರೆ ತಾಂಗ್ ಮತ್ತು ನಿಯಾಂಗ್ ನೇಕ್ ಹೆಸರುಗಳಿಂದ ಕರೆಯಲಾಗುತ್ತದೆ. ಮತ್ತೆಲ್ಲ ಕತೆ ಅಲ್ಲಿನ ಜನಮಾನಸದಲ್ಲೂ ಹಾಗೆಯೇ ಇದ್ದರೂ, ಪ್ರೆ ತಾಂಗ್ ಎಂಬಾತ ಕೌಂಡಿನ್ಯ ಹಾಗೂ ಆತನದ್ದು ಒಡಿಶಾ ಮೂಲ ಎಂಬ ವಿವರಗಳು ಅಲ್ಲಿನವರ ಕತೆಯಲ್ಲಿಲ್ಲ.
ಇದೀಗ ಪ್ರಕಟವಾಗಿರುವ ಹೊಸ ವಂಶವಾಹಿ ಅಧ್ಯಯನವು ಕೌಂಡಿನ್ಯನ ಕತೆಯನ್ನು ಮತ್ತು ಭಾರತದ ಮೂಲವನ್ನು ಕಾಂಬೋಡಿಯದ ವಿಷಯದಲ್ಲಿ ಇನ್ನಷ್ಟು ಗಟ್ಟಿಗೊಳಿಸುವಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!