ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಅವರನ್ನು ‘ದೇಶದ್ರೋಹಿ’ ಎಂದು ಉಲ್ಲೇಖಿಸಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಇದೀಗ ಮತ್ತೊಂದು ಹೊಸ ವಿಡಿಯೋ ಬಿಡುಗಡೆ ಮಾಡುವ ಮೂಲಕ ಶಿಂಧೆ ನೇತೃತ್ವದ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಗ್ಗೆ ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿದ ವಿವಾದದ ನಡುವೆಯೇ, ಕಮ್ರಾ, ಶಿವಸೇನಾ ಕಾರ್ಯಕರ್ತರು ಮುಂಬೈನ ಹ್ಯಾಬಿಟ್ಯಾಟ್ ಕಾಮಿಡಿ ಕ್ಲಬ್ ಧ್ವಂಸಗೊಳಿಸಿರುವ ದೃಶ್ಯಗಳನ್ನು ಹೊಂದಿರುವ ಹೊಸ ವಿಡಂಬನಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮುಂಬೈನ ಖಾರ್‌ನಲ್ಲಿರುವ ಹ್ಯಾಬಿಟ್ಯಾಟ್ ಸ್ಟುಡಿಯೋದಲ್ಲಿ ನಡೆದ ಈವೆಂಟ್ನಲ್ಲಿ ಕಮ್ರಾ ಅವರು ಶಿಂಧೆ ಅವರನ್ನು ‘ದೇಶದ್ರೋಹಿ’ ಎಂದು ಉಲ್ಲೇಖಿಸಿದ ನಂತರ ವಿವಾದ ಭುಗಿಲೆದ್ದಿದೆ. ಹಿಂದಿ ಸಿನಿಮಾದ ಹಾಡನ್ನು ಮಾರ್ಪಡಿಸಿ, ಶಿಂಧೆ ರಾಜಕೀಯ ಜೀವನದ ಕುರಿತು ಟೀಕಿಸಿದ್ದರು. ಇದರಿಂದ ಕೆರಳಿದ ಶಿವಸೇನಾ ಕಾರ್ಯಕರ್ತರು, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಕಾರ್ಯಕ್ರಮ ನಡೆಸಿಕೊಟ್ಟ ಸ್ಥಳವನ್ನು ಧ್ವಂಸಗೊಳಿಸಿದ್ದಾರೆ. ಅಲ್ಲಿದ್ದ ಪೀಠೋಪಕರಣ ಸೇರಿ ವಸ್ತುಗಳನ್ನು ಎತ್ತಿ ಬಿಸಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಮುಂಬೈನ ಖಾರ್ ಪೊಲೀಸರು ಸ್ಟ್ಯಾಂಡಪ್ ಕಮಿಡಿಯನ್ ಕುನಾಲ್ ಕಮ್ರಾಗೆ ಸಮನ್ಸ್ ನೀಡಿದರು. ಮಂಗಳವಾರ ಪೊಲೀಸರ ಮುಂದೆ ಹಾಜರಾಗಲು ಅವರನ್ನು ಕೇಳಲಾಗಿದೆ. ಇದೀಗ ಈ ಬೆಳವಣಿಗೆ ಬೆನ್ನಲ್ಲೇ ಕುನಾಲ್ ಕಮ್ರಾ ಮತ್ತೆ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ವಿಧ್ವಂಸಕ ಕೃತ್ಯಕ್ಕೀಗ ಕುನಾಲ್ ಕಮ್ರಾ ಹೊಸ ವಿಡಿಯೋದೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ಅವರು “ಹಮ್ ಹೊಂಗೆ ಕಾಮ್ಯಾಬ್” ಎಂಬ ಪ್ರತಿಭಟನಾ ಗೀತೆಯನ್ನು “ಹಮ್ ಹೊಂಗೆ ಕಂಗಾಲ್ ಏಕ್ ದಿನ್” ಎಂಬ ಸಾಹಿತ್ಯದೊಂದಿಗೆ ಅಣಕಿಸಿದ್ದಾರೆ. ಕ್ಲಬ್ ವಿಧ್ವಂಸಗೊಂಡ ದೃಶ್ಯಗಳನ್ನು ಇದರಲ್ಲಿ ಸೇರಿಸಿದ್ದಾರೆ.
ಹೊಸ ವೀಡಿಯೊದಲ್ಲಿ, ಶಿವಸೇನೆ ಸದಸ್ಯರು ದಿ ಹ್ಯಾಬಿಟ್ಯಾಟ್ ಅನ್ನು ಧ್ವಂಸ ಮಾಡುತ್ತಿರುವ ದೃಶ್ಯಗಳು ಪ್ರಸಾರವಾಗುತ್ತಿದ್ದಂತೆ, ಕಮ್ರಾ ‘ಹಮ್ ಹೊಂಗೆ ಕಂಗಾಲ್’ (‘ಹಮ್ ಹೊಂಗೆ ಕನ್ಯಾಬ್’ ರಾಗದ ಮಾರ್ಪಡಿಸಿದ ಆವೃತ್ತಿ) ಹಾಡಿದ್ದಾರೆ. ನಾಥುರಾಮ್ ಗೋಡ್ಸೆ ಮತ್ತು ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಅವರನ್ನು ಕಮ್ರಾ ಉಲ್ಲೇಖಿಸಿ ಸೇನಾ ನಾಯಕರ ಮೇಲೆ ವಾಗ್ದಾಳಿ ಮಾಡಿದ್ದಾರೆ.