SHOCKING | ನವಜಾತ ಶಿಶುವನ್ನು ಕಮೋಡ್‌ನೊಳಗೆ ಹಾಕಿ ಫ್ಲಶ್‌!! ರಾಜ್ಯವೇ ಬೆಚ್ಚಿ ಬೀಳುವ ಘಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನವಜಾತ ಶಿಶುವನ್ನು ಕಮೋಡ್‌ನ ಒಳಗೆ ಹಾಕಿ ಫ್ಲಶ್‌ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದು ಇಡೀ ಮನುಕುಲವೇ ತಲೆತಗ್ಗಿಸುವಂತ ನೀಚ ಘಟನೆಯಾಗಿದ್ದು, ಕೃತ್ಯ ಮಾಡಿದವರಿಗೆ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.

ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆಸ್ಪತ್ರೆಯೊಂದರಲ್ಲಿ ಆಗತಾನೆ ಜನಿಸಿರುವ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್ ಮಾಡಲಾಗಿದೆ. ಬುಧವಾರ ರಾತ್ರಿ ನಡೆದ ಈ ಅಮಾನವೀಯ ವಿದ್ಯಮಾನ ಇಂದು ಬೆಳಕಿಗೆ ಬಂದಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಧವಾರ ರಾತ್ರಿ 10:30 ರ‌ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಆಸ್ಪತ್ರೆಯ ನೆಲಮಹಡಿಯ ಟಾಯ್ಲೆಟ್​ಗೆ ತೆರಳಿದ್ದ ವೈದ್ಯಕೀಯ ಸಿಬ್ಬಂದಿಗೆ ಮಹಿಳೆಯರ ಟಾಯ್ಲೆಟ್​​ನಲ್ಲಿ‌ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ನೀರು ಫ್ಲಶ್ ಆಗದ ಕಾರಣ‌ ವೈದ್ಯಕೀಯ ಸಿಬ್ಬಂದಿ ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದರು. ಅದರಂತೆ, ಸಿಬ್ಬಂದಿ ವ್ಯಾಕ್ಯೂಮ್‌ನಿಂದ ಕ್ಲೀನ್ ಮಾಡಿದ್ದಾರೆ. ಆಗ, ಏನೋ‌ ವಸ್ತು ಅಡ್ಡ ಇರುವುದು ಪತ್ತೆಯಾಗಿದೆ. ಆರಂಭದಲ್ಲಿ, ಬಟ್ಟೆ ಅಥವಾ ಏನಾದರು ಕೊಳೆ ಇರಬಹುದು ಎಂದು ಅವರು ಶಂಕಿಸಿದ್ದಾರೆ.

ಟಾಯ್ಲೆಟ್ ಶುಚಿಗೊಳಿಸುವ, ಬ್ಲಾಕ್ ನಿರ್ಮೂಲನೆಗೊಳಿಸುವ ಪರಿಕರವನ್ನು ಬಳಸಿ ಒಳಗೆ ಸಿಕ್ಕಿಹಾಕಿಕೊಂಡಿದ್ದ ವಸ್ತುವನ್ನು ಹೊರ ತೆಗೆದಾಗ ಸಿಬ್ಬಂದಿ ಆಘಾತಕ್ಕೊಳಗಾಗಿದ್ದರು. ನವಜಾತ ಶಿಶುವಿನ ದೇಹ ಅವರಿಗೆ ಸಿಕ್ಕಿದೆ. ಶಿಶು ಜನಿಸಿ ಒಂದೆರಡು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಟಾಯ್ಲೆಟ್ ಒಳಗೆ ನವಜಾತ ಶಿಶು ಹೇಗೆ ಬಂದಿರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಯಾವ ತಾಯಿ ಕೂಡ ಹೀಗೆ ಮಾಡಲು ಸಾಧ್ಯವೇ ಎಂದು ಸ್ಥಳದಲ್ಲಿದ್ದವರು ಕಳವಳ ವ್ಯಕ್ತಪಡಿಸಿದ್ದಾರೆ. ಅದೇ‌ ಆಸ್ಪತ್ರೆಯಲ್ಲಿ ಶಿಶುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಕೃತ್ಯ ಮಾಡಿದವರಿಗೆ ತಕ್ಕ ಶಿಕ್ಷೆ ನೀಡಿ ಎಂದು ಇಡೀ ರಾಜ್ಯವೇ ಆಗ್ರಹಿಸುತ್ತಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!