ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಮುಖ್ಯಮಂತ್ರಿ ಆಯ್ಕೆ ಇನ್ನೂ ಸ್ಪಷ್ಟವಾಗಿಲ್ಲ. ಈಗಾಗಲೇರೇಸ್ನಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ಹಾಗೂ ಬಿಜೆಪಿಯ ದೇವೇಂದ್ರ ಫಡ್ನವಿಸ್ ಹೆಸರು ಚಾಲ್ತಿಯಲ್ಲಿತ್ತು. ಆದರೆ, ಕಳೆದ ವಾರ ಸುದ್ದಿಗೋಷ್ಠಿ ನಡೆಸಿದ್ದ ಏಕನಾಥ್ ಶಿಂಧೆ ತನಗೆ ಸಿಎಂ ಹುದ್ದೆಯಲ್ಲಿರಬೇಕೆಂಬ ಆಸೆಯಿಲ್ಲ ಎಂದು ಹೇಳಿದ್ದರು. ಹಾಗೇ, ಮುಖ್ಯಮಂತ್ರಿ ಯಾರಾಗಬೇಕೆಂಬ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ನಿರ್ಧಾರವೇ ಅಂತಿಮ, ಅವರ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದಿದ್ದರು. ಹೀಗಾಗಿ ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರದ ಸಿಎಂ ಯಾರೆಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ನೀಡಿಲ್ಲ. ಆದರೆ, ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ , ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಂದಿನ ಸಿಎಂ ಆಗಲಿದ್ದಾರೆ ಎಂದು ಘೋಷಿಸಿದ್ದಾರೆ.
ಕೆಲವು ದಿನಗಳ ಹಿಂದೆ ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ, ಅಜಿತ್ ಪವಾರ್ ಮೂವರೂ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಇದೀಗ ಬಿಜೆಪಿ ನಾಯಕ ಸುಧೀರ್ ಈ ಬಗ್ಗೆ ಮಾಹಿತಿ ನೀಡಿದ್ದು, ಬಿಜೆಪಿಯ ಈ ನಿರ್ಧಾರದ ಬಗ್ಗೆ ಏಕನಾಥ್ ಶಿಂಧೆ ಕೋಪಗೊಂಡಿಲ್ಲ. ಸಚಿವ ಸ್ಥಾನದ ಬಗ್ಗೆ ಅವರದೇ ಆದ ಬೇಡಿಕೆಗಳಿದ್ದರೆ ಕೋಪವಿದೆ ಎಂದು ಅರ್ಥವಲ್ಲ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಏಕನಾಥ್ ಶಿಂಧೆಯವರಿಗೆ ಸಿಗಬೇಕಾದ ಗೌರವ ಸಿಗುತ್ತದೆ. ಏಕನಾಥ್ ಶಿಂಧೆಯವರನ್ನೂ ಸರ್ಕಾರದ ಭಾಗವಾಗಿಸುತ್ತಾರೆ ಎಂದು ಎಂದು ಸುಧೀರ್ ಮುಂಗಂಟಿವಾರ್ ಹೇಳಿದ್ದಾರೆ.
ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸುಧೀರ್ ಮುಂಗಂತಿವಾರ್ ಇಂದು ಘೋಷಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ದೇವೇಂದ್ರ ಫಡ್ನವಿಸ್ ಅವರನ್ನೇ ಸಿಎಂ ಆಗಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂಬುದು ನನ್ನ ಅಭಿಪ್ರಾಯವಾಗಿದೆ. ಬಿಜೆಪಿ ಈ ಬಗ್ಗೆ ಯಾವುದೇ ಸರ್ಪ್ರೈಸ್ ನೀಡುವುದಿಲ್ಲ ಎಂದಿದ್ದಾರೆ.
ಡಿಸೆಂಬರ್ 5 ರಂದು ಮುಂಬೈನಲ್ಲಿ ಭವ್ಯವಾದ ಸಮಾರಂಭದಲ್ಲಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಸುಧೀರ್ ಹೇಳಿದ್ದಾರೆ. ಇಂದು ಅಥವಾ ಡಿಸೆಂಬರ್ 3ರಂದು ನಡೆಯಲಿರುವ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಲಿರುವ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಭಾನುವಾರ ಹೇಳಿದ್ದಾರೆ.