Sunday, November 27, 2022

Latest Posts

8 ರಾಜ್ಯಗಳಲ್ಲಿ PFI ಮೇಲೆ ಎರಡನೇ ಸುತ್ತಿನ NIA ದಾಳಿ: ಕರ್ನಾಟಕದಲ್ಲಿ 60 ಕಾರ್ಯಕರ್ತರು ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಇತರ ತನಿಖಾ ಸಂಸ್ಥೆಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲೆ ಎರಡನೇ ಸುತ್ತಿನ ದಾಳಿ ನಡೆಸಿವೆ. ಎನ್‌ಐಎ ತೀವ್ರಗಾಮಿ ಸಂಘಟನೆಯ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಮುಂದುವರೆಸಿದೆ.
ಎಂಟು ವಿವಿಧ ರಾಜ್ಯಗಳಲ್ಲಿ ಪಿಎಫ್‌ಐ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ವರೆಗೆ ನೂರಾರು ಪಿಎಫ್‌ಐ ಸದಸ್ಯರನ್ನೂ ಬಂಧಿಸಲಾಗಿದೆ.
ಎನ್‌ಐಎ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಮೊದಲ ಸುತ್ತಿನ ದಾಳಿಯಲ್ಲಿ ಪಿಎಫ್‌ಐ ಮುಖಂಡರ ವಿಚಾರಣೆ ವೇಳೆ ಹಲವು ಮಹತ್ವದ ಮಾಹಿತಿಗಳು ಲಭಿಸಿವೆ. ಎನ್‌ಐಎ ನೀಡಿದ ಸುಳಿವುಗಳ ಆಧಾರದ ಮೇಲೆ ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ಎಂಟು ರಾಜ್ಯಗಳಲ್ಲಿ ದಾಳಿ ನಡೆಸುತ್ತಿವೆ.
ಅಸ್ಸಾಂನ 8 ಜಿಲ್ಲೆಗಳಿಂದ 21 ಪಿಎಫ್‌ ಐ ಸದಸ್ಯರನ್ನು ಬಂಧಿಸಲಾಗಿದೆ. ಗೋಲ್ಪಾರಾ, ಕಮ್ರೂಪ್, ಬರ್ಪೇಟಾ, ಧುಬ್ರಿ, ಬಾಗ್ಸಾ, ದರ್ರಾಂಗ್, ಉದಾಲ್ಗುರಿ ಮತ್ತು ಕರೀಂಗಂಜ್ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಕಾರ್ಯಕರ್ತರನ್ನು ಜಾಲಾಡಿ ಬಂಧಿಸಲಾಗಿದೆ.  ಇಂದು ಬೆಳಗ್ಗೆ ಆರಂಭವಾದ ದಾಳಿ ಇನ್ನೂ ಮುಂದುವರೆದಿದೆ.
ಕರ್ನಾಟಕದಲ್ಲಿ ಈ ವರೆಗೆ 60 ಪಿಎಫ್‌ಐ ಸದಸ್ಯರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಕೋಲಾರ ಜಿಲ್ಲೆಯಲ್ಲಿ ಆರು ಮಂದಿ ಪಿಎಫ್‌ಐ ಸದಸ್ಯರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ. ವಿಜಯಪುರದಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಅಶ್ಫಾಕ್ ಜಮಖಂಡಿ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ.
ಚಿತ್ರದುರ್ಗದಲ್ಲಿ ಪಿಎಫ್‌ಐ ಮುಖಂಡ ಅಫ್ಹಾನ್ ಅಲಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಉಗ್ರಗಾಮಿ ಸಂಘಟನೆಯ ನಾಲ್ವರನ್ನು ಮುಂಜಾಗ್ರತಾ ಬಂಧನದಲ್ಲಿ ಬಂಧಿಸಲಾಗಿದೆ.
ಚಾಮರಾಜನಗರದಲ್ಲಿ ಇಬ್ಬರು ಪಿಎಫ್‌ಐ ಮುಖಂಡರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ. ಚಾಮರಾಜನಗರದಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಕಪಿಲ್ ಮತ್ತು ಕಾರ್ಯದರ್ಶಿ ಸುಹೈಬ್ ಅವರನ್ನು ಬಂಧಿಸಲಾಗಿದೆ.
ಮಂಡ್ಯದಲ್ಲೂ ಪೊಲೀಸರು ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷನ ಮನೆ ಮೇಲೆ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ.
ನಗರದ ಗುತ್ತಲು ಬಡಾವಣೆಯ ಸಪ್ದರಿಯಾ ನಗರದಲ್ಲಿ ವಾಸವಾಗಿರುವ ಇರ್ಫಾನ್ (34) ಎಂಬಾತ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದ್ದಾರೆ.
ಪುಣೆಯಲ್ಲಿ, ರಾಜ್ಯ ಪೊಲೀಸರು ಆರು ಮಂದಿ ಪಿಎಫ್‌ಐ ಬೆಂಬಲಿಗರನ್ನು ವಿಚಾರಣೆಗಾಗಿ ಬಂಧಿಸಿದ್ದಾರೆ. ಈ ಪೊಲೀಸ್ ಕ್ರಮವು ದೇಶಾದ್ಯಂತ ನಡೆಸಲಾದ ಎಟಿಎಸ್ ಮತ್ತು ಎನ್ಐಎ ದಾಳಿಯೊಂದಿಗೆ ಸಮನ್ವಯವಾಗಿದೆ.
ಮೂಲಗಳ ಪ್ರಕಾರ, ಉತ್ತರ ಪ್ರದೇಶದ ಸಿಯಾನಾ ಮತ್ತು ಸರೂರ್‌ಪುರ ಮತ್ತು ಮೀರತ್‌ನ ಲಿಸ್ರಿ ಗೇಟ್‌ನಲ್ಲಿ ನಿನ್ನೆ ತಡರಾತ್ರಿಯಿಂದ ದಾಳಿ ನಡೆಸಲಾಗುತ್ತಿದೆ. ಮೀರತ್, ಬುಲಂದ್‌ಶಹರ್ ಮತ್ತು ಸೀತಾಪುರದಿಂದ ಹಲವು ಶಂಕಿತರನ್ನು ಬಂಧಿಸಲಾಗಿದೆ.
ಪಿಎಫ್‌ಐಗೆ ಸಂಬಂಧಿಸಿದಂತೆ ಸೋಮವಾರ ತಡರಾತ್ರಿಯಿಂದ ದೆಹಲಿಯ ಶಾಹೀನ್ ಬಾಗ್ ಮತ್ತು ಜಾಮಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಾಳಿ ನಡೆಯುತ್ತಿದೆ. ದಾಳಿ ವೇಳೆ ಸುಮಾರು 12 ಮಂದಿಯನ್ನು ಬಂಧಿಸಲಾಗಿದೆ. ತನಿಖಾ ಸಂಸ್ಥೆಗಳ ಜೊತೆಗೆ ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳ ತಂಡಗಳು ದಾಳಿಯಲ್ಲಿ ಪಾಲ್ಗೊಂಡಿದ್ದವು. ಈಶಾನ್ಯ ದೆಹಲಿಯಿಂದ ನಾಲ್ವರನ್ನು ಬಂಧಿಸಲಾಗಿದೆ.
ಇದಕ್ಕೂ ಮುನ್ನ ಗುರುವಾರ (ಸೆಪ್ಟೆಂಬರ್ 22) ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಸೇರಿದಂತೆ 15 ರಾಜ್ಯಗಳ 93 ಸ್ಥಳಗಳಲ್ಲಿ ಪಿಎಫ್‌ಐ ಸಂಘಟನೆಗೆ ಸಂಬಂಧಿಸಿದಂತೆ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿತು. ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಣಿಪುರಗಳಲ್ಲಿ ಕಾರ್ಯಚರಣೆ ನಡೆಸಲಾಗಿತ್ತು.
100 ಕ್ಕೂ ಹೆಚ್ಚು PFI ಸದಸ್ಯರು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ ಜನರನ್ನು ವಿವಿಧ ಪ್ರಕರಣಗಳಲ್ಲಿ ಎನ್‌ಐಎ ಬಂಧಿಸಿತ್ತು.
ಭಯೋತ್ಪಾದನೆಗೆ ಬೆಂಬಲ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ, ಶಸ್ತ್ರಾಸ್ತ್ರ ತರಬೇತಿ ನೀಡಲು ಶಿಬಿರಗಳನ್ನು ಆಯೋಜಿಸುವುದು ಮತ್ತಿತರೆ ಆರೋಪಗಳ ಮೇರೆಗೆ ಪಿಎಫ್‌ಐ ಉನ್ನತ ನಾಯಕರು ಮತ್ತು ಸದಸ್ಯರ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!