ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ವರದಿ,ಚಿಕ್ಕಮಗಳೂರು:
ಕೇರಳದಲ್ಲಿ ನಿಫಾ ವೈರಾಣು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ನಿಫಾ ವೈರೆಸ್ ನಿಯಂತ್ರಣ ಕುರಿತು ವಿವಿಧ ಇಲಾಖೆಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜ್ವರ, ತಲೆನೋವು, ಆಯಾಸ, ತಲೆನೋವು, ತಲೆ ಸುತ್ತುವಿಕೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು ನಿಫಾ ವೈರಾಣು ಜ್ವರದ ಲಕ್ಷಣಗಳಾಗಿದ್ದು ಸಾರ್ವಜನಿಕರಿಗೆ ಇದರ ಕುರಿತು ಅರಿವಿರಬೇಕು ಎಂದರು.
ಸಾಮಾನ್ಯವಾಗಿ ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಅಥವಾ ಬಾವಲಿಗಳು ಸೇವಿಸುವ ಹಣ್ಣುಗಳನ್ನು ಸೇವಿಸುವುದರಿಂದ ಇತರ ಪ್ರಾಣಿಗಳಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ನಿಫಾ ಸೋಂಕಿನ ಹರಡುವಿಕೆ ಮತ್ತು ನಿಯಂತ್ರಣದ ಬಗ್ಗೆ ನಗರಸಭೆ, ಪುರಸಭೆ, ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಇಲಾಖೆ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಮಂಜುನಾಥ್ ಮಾತನಾಡಿ ನಿಫಾ ವೈರಸ್ ಆರ್.ಎನ್.ಎ ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇದಕ್ಕೆ ಸೇರಿದ್ದಾಗಿದೆ. ಬಾವಲಿಗಳ ಮುಖಾಂತರ ಮನುಷ್ಯರಿಗೆ ಹರಡುವ ಕಾರಣದಿಂದಾಗಿ ಈ ವೈರಸ್ ಜ್ವರಕ್ಕೆ ಬಾವಲಿ ಜ್ವರ ಎಂಬ ಅನ್ವರ್ಥ ನಾಮ ಬಂದಿದೆ ಎಂದರು.
1998 ರಲ್ಲಿ ಮಲೇಷ್ಯಾದ ಒಂದು ಸಣ್ಣ ಹಳ್ಳಿಯಾದ ಕಾಮ್ವಂಗ್ ಸುಂಗೈ ನಿಫಾ ಎಂಬ ಸ್ಥಳದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದಾಗಿ ನಿಫಾ ವೈರಸ್ ಎಂದು ಕರೆಯಲಾಗಿತ್ತು. ಈ ಹಳ್ಳಿಯ ಹಂದಿ ಸಾಕುವ ರೈತರಲ್ಲಿ ಮೊದಲು ಈ ಜ್ವರ ಕಾಣಿಸಿಕೊಂಡು ಮೆದುಳಿನ ಉರಿಯೂತ ಮತ್ತು ಉಸಿರಾಟದ ತೊಂದರೆ ಉಂಟು ಮಾಡಿ ನೂರಾರು ಮಂದಿ ಅಸುನೀಗಿದ್ದರು, ಆಗ ರೋಗ ಪೀಡಿತ ಲಕ್ಷಾಂತರ ಹಂದಿಗಳನ್ನು ನಿರ್ಮೂಲನ ಮಾಡಿ ರೋಗವನ್ನು ಹತೋಟಿಗೆ ತರಲಾಗಿತ್ತು ಎಂದು ವಿವರಿಸಿದರು.
2001 ರಲ್ಲಿ ಭಾರತದ ಪಶ್ಛಿಮ ಬಂಗಾಳದ ಸಿಲಿಗುರಿಯಲ್ಲಿ 66 ಮಂದಿಗೆ ಈ ರೋಗ ತಗಲಿತ್ತು, 45 ಮಂದಿ ಸಾವನ್ನಪ್ಪಿದ್ದರು, 2001 ರಿಂದ 2012 ರ ವರೆಗೆ ಸುಮಾರು 17 ಬಾರಿ ಈ ಬಾವಲಿ ಜ್ವರ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಕಾಣಿಸಿಕೊಂಡು ಸುಮಾರು 280 ಮಂದಿಗೆ ಜ್ವರ ತಗುಲಿ 211 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಎಲ್ಲಾ ವೈರಸ್ ಜ್ವರಗಳಲ್ಲಿರುವಂತೆ ಈ ಜ್ವರದಲ್ಲಿಯು ತೀವ್ರತರವಾದ ಜ್ವರ, ವಿಪರೀತ ತಲೆನೋವು, ವಾಂತಿ, ತಲೆಸುತ್ತು, ಮೈ ಕೈ ನೋವು ಇರುತ್ತದೆ ರೋಗದ ತೀವ್ರತೆ ಹೆಚ್ಚಾದಾಗ ಪ್ರಜ್ಞಾನಹೀನತೆ ಮತ್ತು ಅಪಸ್ಮಾರದ ಅನುಭವ ಉಂಟಾಗುತ್ತದೆ. ಸುಮರು 6 ರಿಂದ 12 ದಿನಗಳ ಕಾಲ ಈ ರೋಗದ ಲಕ್ಷಣ ಇರುತ್ತದೆ ಕೊನೆ ಹಂತದಲ್ಲಿ ತಲೆ, ಮೆದುಳಿಗು ಹರಡುತ್ತದೆ ಮತ್ತು ಹೃದಯದ ಸ್ನಾಯುಗಳಿಗೆ ಹರಡಿ ಸ್ನಾಯುಗಳನ್ನು ಹಾಳು ಮಾಡುತ್ತದೆ, ಮೆದುಳು ಉರಿಯೂತ ಉಂಟಾಗುತ್ತದೆ ಎಂದರು.
ವೈರಾಣು ದೇಹಕ್ಕೆ ಸೇರಿದ ಬಳಿಕ 5 ರಿಂದ 14 ದಿನಗಳ ಮೇಲೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಜ್ವರದ ತೀವ್ರತೆ ಜಾಸ್ತಿಯಾಗಿ 24 ರಿಂದ 48 ಗಂಟೆಗಳೊಳಗೆ ಕೋಮಾವಸ್ಥೆಗೆ ತಲುಪಬಹುದು. ಜ್ವರದ ತೀವ್ರತೆ ಜಾಸ್ತಿಯಾದಂತೆ ವ್ಯಕ್ತಿಗೆ ತಾನು ಎಲ್ಲಿದೇನೆ, ಏನು ಮಾಡುತ್ತಿದ್ದೇನೆ ಎನ್ನುವುದರ ಪರಿವಿಲ್ಲವಾಗಿ ತಾನಿರುವ ಜಾಗ ಮತ್ತು ವ್ಯಕ್ತಿಯನ್ನು ಗುರುತು ಹಿಡಿಯದಿರಬಹುದಲ್ಲದೇ ಮತಿಭ್ರಮಣೆಗೊಳಗಾದಂತೆ ವರ್ತಿಸುತ್ತಾನೆ, ಇದನ್ನು ಸಮಾನ್ಯ ಜ್ವಾರ ಎಂದು ಕಡೆಗಣಿಸಿದರೆ ಜೀವಕ್ಕೆ ಕುತ್ತು ತರಬಹುದು ಎಂದರು.
ಸಭೆಯಲ್ಲಿ ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿ ಡಾ.ಹೆಚ್ ಎಲ್ ನಾಗರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೆಶಪ್ಪ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣ ಮೂರ್ತಿ, ಪ್ರದೇಶಿಕ ಸಾರಿಗೆ ಇಲಾಖೆಯ ಉಪನಿರ್ದೇಶಕ ಮುರುಗೇಂದ್ರ ಶಿರೋಳ್ಕರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.