Sunday, August 14, 2022

Latest Posts

ಅಮರನಾಥದಲ್ಲಿ ರಾತ್ರಿಯಿಡೀ ರಕ್ಷಣಾ ಕಾರ್ಯ: ಇನ್ನೂ ಸಿಕ್ಕಿಲ್ಲ ನಾಪತ್ತೆಯಾದವರ ಸುಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಮ್ಮು ಕಾಶ್ಮೀರದ ಅಮರನಾಥದ ಬಳಿಯಲ್ಲಿ ಶುಕ್ರವಾರ ಮೇಘಸ್ಪೋಟದ ಪರಿಣಾಮ ಹಠಾತ್‌ ಪ್ರವಾಹವುಂಟಾಗಿದ್ದು 40 ಜನರು ಕಣ್ಮರೆಯಾಗಿದ್ದಾರೆ. ನಾಪತ್ತೆಯಾದವರ ಶೋಧಕ್ಕಾಗಿ ರಕ್ಷಣಾ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ರಾತ್ರಿ ಯಿಡೀ ರಕ್ಷಣಾ ಕಾರ್ಯ ಮುಂದುವರೆದಿದ್ದು ನಾಪತ್ತೆಯಾದವರ ಸುಳಿವು ಸಿಕ್ಕಿಲ್ಲವೆಂದು ಮೂಲಗಳು ವರದಿ ಮಾಡಿವೆ.

ಇಲ್ಲಿಯವರೆಗಿನ ಮಾಹಿತಿ ಪ್ರಕಾರ ಮೇಘಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದರು ಮತ್ತು 105 ಜನರು ಗಾಯಗೊಂಡಿದ್ದಾರೆ. ಅವಘಡದಲ್ಲಿ ಸಿಲುಕಿದ್ದ ಒಟ್ಟೂ 15,000 ಯಾತ್ರಾರ್ಥಿಗಳನ್ನು ರಕ್ಷಿಸಲಾಗಿದೆ. ಅವಶೇಷಗಳಡಿ ಇನ್ನೂ ಹಲವರು ಸಿಕ್ಕಿಬಿದ್ದಿರುವ ಆತಂಕದ ನಡುವೆ ಯಾವುದೇ ವಿರಾಮವಿಲ್ಲದೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಅಮರನಾಥ ಯಾತ್ರೆಯಲ್ಲಿ ತೊಡಗಿರುವ ವಿವಿಧ ಏಜೆನ್ಸಿಗಳೊಂದಿಗೆ ಶನಿವಾರ ಸಭೆ ನಡೆಸಿದ್ದು, ರಕ್ಷಣಾ ಕಾರ್ಯಾಚರಣೆಗಳು ಮುಗಿಯುವವರೆಗೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.

ಭಾರತೀಯ ಸೇನೆ, ಸಿಆರ್‌ಪಿಎಫ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಪೊಲೀಸರ ಜಂಟಿ ಪ್ರಯತ್ನದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೇಘಸ್ಫೋಟದ ನಂತರ ಸಾವನ್ನಪ್ಪಿದ 16 ಯಾತ್ರಾರ್ಥಿಗಳ ಮೃತದೇಹಗಳನ್ನು ಶ್ರೀನಗರದ ಬಿಎಸ್ಎಫ್ ಕಾಶ್ಮೀರ ಪ್ರಧಾನ ಕಚೇರಿಯಿಂದ ಪೊಲೀಸ್ ಪ್ರಧಾನ ಕಚೇರಿಗೆ ಸ್ಥಳಾಂತರಿಸಲಾಗಿದೆ.

ಭಾರತೀಯ ವಾಯುಪಡೆ (IAF) ಮತ್ತು BSF ಗಾಯಗೊಂಡ ವ್ಯಕ್ತಿಗಳು ಮತ್ತು ಮೃತ ದೇಹಗಳನ್ನು ಎತ್ತಲು ALH ಧ್ರುವ ಮತ್ತು Mi-17 ಚಾಪರ್‌ಗಳನ್ನು ಬಳಸಿಕೊಂಡಿವೆ. IAFನ Mi-17V5 ಹೆಲಿಕಾಪ್ಟರ್‌ಗಳು 21 ಬದುಕುಳಿದವರನ್ನು ರಕ್ಷಿಸಿದ್ದು ಆರು ಮೃತ ದೇಹಗಳನ್ನು ರವಾನೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss