ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ ಪಕ್ಷವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು 58 ದಿನಗಳ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ಈ ಪ್ರವಾಸವು ಜೂನ್ 17 ಸೋಮವಾರದಿಂದ ಆರಂಭವಾಗಿ ಆಗಸ್ಟ್ 10ರವರೆಗೆ ನಡೆಯಲಿದ್ದು, ರಾಜ್ಯದ 90 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ.
ತುಮಕೂರಿನಿಂದ ಶುರುವಾಗಲಿರುವ ಈ ಪ್ರವಾಸದಲ್ಲಿ ನಿಖಿಲ್ ದಿನಕ್ಕೆ ಎರಡು ಅಥವಾ ಮೂರು ಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ಸ್ಥಳೀಯ ಮುಖಂಡರು, ಗ್ರಾಮ ಪಂಚಾಯತ್, ತಾಪಂ, ಜಿಪಂ ಸದಸ್ಯರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ನಿರಂತರ ಸಭೆಗಳನ್ನು ನಡೆಸಲಿದ್ದಾರೆ. ಪ್ರವಾಸದ ಸಮಯದಲ್ಲಿ ಅವರು ಪಕ್ಷದ ಸಂಘಟನೆ, ಬೂತ್ ಮಟ್ಟದ ಬಲವರ್ಧನೆ, ಚುನಾವಣಾ ತಯಾರಿ ಹಾಗೂ ಕಾರ್ಯಕರ್ತರ ಅಭಿಪ್ರಾಯಗಳ ಸಂಗ್ರಹದತ್ತ ಗಮನ ಹರಿಸಲಿದ್ದಾರೆ.
ಈ ಪ್ರವಾಸದ ಭಾಗವಾಗಿ, ಪಕ್ಷದ ಹಿರಿಯ ನಾಯಕರ ಸಹಕಾರವೂ ಕೂಡ ಇದೆ. ನಿಖಿಲ್ ಅವರು ಈಗಾಗಲೇ ಹಿರಿಯ ನಾಯಕರಿಗೆ ದೂರವಾಣಿ ಕರೆ ಮಾಡಿ ಈ ಪ್ರವಾಸದ ವಿವರಗಳನ್ನು ಹಂಚಿಕೊಂಡಿದ್ದು, ಅನೇಕರು ತಮ್ಮ ಹಾಜರಾತಿಗೆ ಒಪ್ಪಿಗೆಯನ್ನೂ ಸೂಚಿಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ಈ ಪ್ರವಾಸದ ಬಳಿಕ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಹರಿದಾಡುತ್ತಿವೆ.
ಈ ಕಾರ್ಯಕ್ರಮವು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಹಾಗೂ ಪಕ್ಷದ ಮೌಲ್ಯಾಧಾರಿತ ಬುನಾದಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ನಿಖಿಲ್ ಈ ಮೂಲಕ ತಮ್ಮ ನಾಯಕತ್ವ ಸಾಮರ್ಥ್ಯವನ್ನು ಸಾಬೀತುಪಡಿಸಲು ಮುಂದಾಗಿದ್ದು, ಜೆಡಿಎಸ್ಗೆ ಹೊಸ ಉತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ.