ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಸಿಎಂ ನೀತೀಶ್ ಕುಮಾರ್ ಅವರ ಪಕ್ಷ ಜೆಡಿಯು (ಜನತಾ ದಳ (ಯುನೈಟೆಡ್) ಬಿಜೆಪಿಗೆ ಶಾಕ್ ನೀಡಿದೆ. ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ಜೆಡಿಯು ಹಿಂಪಡೆದಿದೆ.
ಎನ್ ಬಿರೆನ್ ಸಿಂಗ್ ಮಣಿಪುರದ ಮುಖ್ಯಮಂತ್ರಿ. ಈ ರಾಜ್ಯದಲ್ಲಿ ಜೆಡಿಯುನ ಒಬ್ಬನೇ ಶಾಸಕ ಇದ್ದಾರೆ. ಜೆಡಿಯು ಬೆಂಬಲ ಹಿಂಪಡೆದರೂ ಎನ್ ಬಿರೆನ್ ಸಿಂಗ್ ಅವರ ಸ್ಥಾನಕ್ಕೆ ಅಪಾಯವಿಲ್ಲ. ಜೆಡಿಯು ಕೇಂದ್ರ ಮತ್ತು ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಬಿರೆನ್ ಸಿಂಗ್ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ಹಿಂಪಡೆದ ಕೆಲವು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.
2022ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮಣಿಪುರದಲ್ಲಿ 6 ಸ್ಥಾನಗಳನ್ನು ಗೆದ್ದಿತ್ತು, ಆದರೆ ಚುನಾವಣೆಯ ಕೆಲವು ತಿಂಗಳ ನಂತರ ಜೆಡಿಯುನ 5 ಶಾಸಕರು ಬಿಜೆಪಿಗೆ ಸೇರ್ಪಡೆಯಾದರು. ಇದರಿಂದ ಆಡಳಿತ ಪಕ್ಷದ ಬಲ ಹೆಚ್ಚಾಯಿತು. ಮಣಿಪುರ ವಿಧಾನಸಭೆಯಲ್ಲಿ ಒಟ್ಟು 60 ಸ್ಥಾನಗಳಿವೆ. ಬಿಜೆಪಿ 37 ಶಾಸಕರನ್ನು ಹೊಂದಿದೆ. ಬಿಜೆಪಿಗೆ ನಾಗಾ ಎನ್‌ಪಿಎಫ್ (ನಾಗಾ ಪೀಪಲ್ಸ್ ಫ್ರಂಟ್) ನ 5 ಶಾಸಕರು ಮತ್ತು 3 ಪಕ್ಷೇತರ ಶಾಸಕರ ಬೆಂಬಲವಿದೆ. ಮಣಿಪುರದ ಜೆಡಿಯು ಘಟಕದ ಮುಖ್ಯಸ್ಥ ಕೆ.ಎಸ್.ಬಿರೆನ್ ಸಿಂಗ್ ಅವರು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಪತ್ರ ಬರೆದು ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ಹಿಂಪಡೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಜೆಡಿಯು ಪ್ರಮುಖ ಮಿತ್ರಪಕ್ಷ. 2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಎನ್‌ಡಿಎ ಜೊತೆ ಸ್ಪರ್ಧಿಸಿತ್ತು. ಪಕ್ಷಕ್ಕೆ 12 ಸ್ಥಾನಗಳಲ್ಲಿ ಗೆಲುವು ಸಿಕ್ಕಿತು. ಈ ಬಾರಿ ಬಿಜೆಪಿಗೆ ಏಕಾಂಗಿಯಾಗಿ ಬಹುಮತವಿಲ್ಲ. ಹಾಗಾಗಿ ಜೆಡಿಯುನಂತಹ ದೊಡ್ಡ ಮಿತ್ರಪಕ್ಷಗಳ ಮಹತ್ವ ಹೆಚ್ಚಾಗಿದೆ. ಜೆಡಿಯು ಮತ್ತು ಬಿಜೆಪಿ ಬಿಹಾರದಲ್ಲೂ ಮೈತ್ರಿ ಮಾಡಿಕೊಂಡಿವೆ. ಬಿಹಾರದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.