Tuesday, August 16, 2022

Latest Posts

ತಾಲೂಕು ಪಂಚಾಯತ್ ರದ್ದತಿಯಿಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

ಹೊಸ ದಿಗಂತ ವರದಿ, ಕೊಪ್ಪಳ:

ತಾಲೂಕು ಪಂಚಾಯತಿ ರದ್ದುಗೊಳಿಸುವ ವಿಚಾರವಿಲ್ಲ, ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಅವರು ತಾಲೂಕಿನ  ಅಂಜನಾದ್ರಿ ಬೆಟ್ಟಕ್ಕೆ ದಂಪತಿಯೊಂದಿಗೆ ಭೇಟಿ ನೀಡಿ ಹನುಮಂತನ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಾ ಪಂಚಾಯತ್ ರದ್ದು ಕುರಿತು ಕೇಳಿ ಬರುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಈ ವರದಿಯನ್ನು ಕೇಂದ್ರಕ್ಕೆ ರವಾನಿಸಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಅಲ್ಲಿವರೆಗೆ ತಾಲೂಕ ಪಂಚಾಯತಿಗೆ ತೊಂದರೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಐತಿಹಾಸಿಕ ಪ್ರಸಿದ್ದ ಅಂಜನಾದ್ರಿ ಬೆಟ್ಟಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಜರುಗಿಸಲಾಗಿದೆ. ಶೀಘ್ರದಲ್ಲಿ ಶೌಚಾಲಯಗಳು, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ದೇವಸ್ಥಾನ ಅಭಿವೃದ್ದಿಗಾಗಿ ಬಜೆಟ್‍ನಲ್ಲಿ 20 ಕೋಟಿ ವೆಚ್ಚದ ಕೆಲಸ ನಡೆದಿದ್ದು, ಅಗತ್ಯ ಬಿದ್ದಲ್ಲಿ ಪ್ರವಾಸೋದ್ಯಮ ಹಾಗೂ ಧಾರ್ಮಿಕ ದತ್ತಿ ಇಲಾಖೆಯೊಂದಿಗೆ ಚರ್ಚಿಸಿ ಅಭಿವೃದ್ದಿ ಕ್ರಮ ವಹಿಸಲಾಗುವುದು ಎಂದರು.
ನಂತರ ಆನೆಗುಂದಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಗ್ರಾಮ ಪಂಚಾಯತ್ ಕಾರ್ಯವೈಖರಿ ವಿಕ್ಷಣೆ ಮಾಡಿದರು.
ಈ ಸಂಧರ್ಭದಲ್ಲಿ ಸಂಸದರಾದ ಕರಡಿ ಸಂಗಣ್ಣ, ಶಾಸಕ ಬಸವರಾಜ್ ದಡೇಸೂಗೂರು, ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಮಾಜಿ ಕಾಡಾ ಅಧ್ಯಕ್ಷ ಗಿರೇಗೌಡ, ಬಿಜೆಪಿ ಮುಖಂಡರಾದ ಸಂತೋಷ ಕೆಲೋಜಿ, ಗೌರೀಶ ಬಾಗೋಡಿ, ರೈತಮೋರ್ಚಾ ಜಿಲ್ಲಾಧ್ಯಕ್ಷ ಚನ್ನವೀರನಗೌಡ ಆರಾಳ,  ಚನ್ನಪ್ಪ ಮಳಗಿ ಸೇರಿದಂತೆ ಇನ್ನಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss