ಮಂತ್ರಘೋಷಗಳಿಲ್ಲ, ಹೋಮ ಹವನಗಳಿಲ್ಲ, ಇದೇನಿದು ಸ್ವಾಭಿಮಾನಿ ವಿವಾಹ?

ಮಂತ್ರ ಘೋಷಗಳು, ಹೋಮ ಹವನಗಳು, ಅಕ್ಷತೆ, ಹಸೆಮಣೆ, ಹಲವಾರು ಶಾಸ್ತ್ರ..
ಹಿಂದೂ ಸಂಪ್ರದಾಯದ ಮದುವೆ ಎಂದಾಕ್ಷಣ ಈ ಎಲ್ಲವೂ ಕಣ್ಣ ಮುಂದೆ ಬಂದುಹೋಗುತ್ತದೆ.
ಅಂತರ್ಜಾತಿ ವಿವಾಹಗಳಲ್ಲಿ ಯಾರ ಕಡೆಯ ಸಂಪ್ರದಾಯಗಳನ್ನು ಪಾಲಿಸುವುದು, ಹೇಗೆ ಮದುವೆ ಮಾಡುವುದು ಎನ್ನುವ ಚಿಂತೆ ಇದ್ದದ್ದೆ. ಇಲ್ಲೊಂದು ಜೋಡಿ ಇದೆ, ಅಂತರ್ಜಾತಿ ಆದರೆ ಯಾರದ್ದೋ ಒಂದು ಸಂಪ್ರದಾಯದಂತೆ ಇವರು ಮದುವೆಯಾಗಿಲ್ಲ. ಮದುವೆಗೆ ಪೂಜೆ ಭಟ್ಟರೂ ಇಲ್ಲ, ಶಾಸ್ತ್ರಗಳಿಲ್ಲ, ಎಲ್ಲವೂ ತಮ್ಮ ಮನಸ್ಸಿಗೆ ಒಪ್ಪುವಂತ ನಂಬಿಕೆಗಳಷ್ಟೆ. ಇದು ಸ್ವಾಭಿಮಾನಿ ವಿವಾಹ. ಇದರಲ್ಲಿ ಪೂಜಾರರ ಉಪಸ್ಥಿತಿ ಇರುವುದಿಲ್ಲ.

ನಿವೇಥಾ ಹಾಗೂ ಯತಾರ್ಥ್ ಈ ರೀತಿ ಮದುವೆಯಾಗಿ ನೂತನ ಪೀಳಿಗೆಗೆ ಉದಾಹರಣೆ ನೀಡಿದ್ದಾರೆ. ನಿವೇಥಾ ಚೆನ್ನೈ ಹುಡುಗಿ, ಯತಾರ್ಥ್‌ನದ್ದು ಮಧ್ಯಪ್ರದೇಶ. ಸೌತ್ ವೆಡ್ಸ್ ನಾರ್ಥ್ ಅಂದರೆ ಸಂಪ್ರದಾಯ, ಜಾತಿ ಎಲ್ಲವೂ ವಿಭಿನ್ನವಾಗಿ ಇರಬೇಕಾದ್ದೆ. ಆದರೆ ಪ್ರೀತಿಯೇ ಮುಖ್ಯ ಎನ್ನುವವರಿಗೆ ಇದ್ಯಾವುದೂ ಅಡ್ಡಿಯಲ್ಲ. ಸ್ವಾಭಿಮಾನಿ ಮದುವೆ ಬಗ್ಗೆ ಮಾಹಿತಿ ಪಡೆದ ಇವರು, ತಮ್ಮ ಮದುವೆಯೂ ಹಾಗೆ ಇರಲಿ ಎಂದು ನಿರ್ಧಾರ ಮಾಡಿದ್ರು .

ಅಂತರ್ಜಾತಿ ವಿವಾಹಕ್ಕೆ ಒಪ್ಪಿಗೆ ಕೊಟ್ಟ ಪೋಷಕರಿಗೆ ಇದನ್ನು ಒಪ್ಪಿಕೊಳ್ಳುವುದು ಅಷ್ಟೇನು ಕಷ್ಟದ ಮಾತಲ್ಲ. ನಿವೇಥಾ ಮನೆಯಲ್ಲಿ ಇದಕ್ಕೆ ಶೀಘ್ರವೇ ಒಪ್ಪಿಗೆ ಸಿಕ್ಕಿತ್ತು. ಆದರೆ ಯತಾರ್ಥ್ ಅವರ ಮನೆಯಲ್ಲಿ ಒಪ್ಪಲು ಬಹಳ ಸಮಯ ಬೇಕಾಯ್ತು. ಪೂಜಾರರು ಇಲ್ಲದೆ ಏನು ಮದುವೆ, ಏನು ಶಾಸ್ತ್ರ ಎನ್ನುವುದು ಅವರ ವಾದವಾಗಿತ್ತು. ಆದರೆ ಪಟ್ಟು ಬಿಡದೆ ಅವರನ್ನು ಒಪ್ಪಿಸಿದ್ದಾಯ್ತು.

ದಕ್ಷಿಣ ಭಾಗದಲ್ಲಿ ನಾಲ್ಕು ದಿನಗಳ ಮದುವೆ ಸಾಮಾನ್ಯ, ಆದರೆ ಇವರು ಒಂದೇ ದಿನಕ್ಕೆ ಎಲ್ಲವನ್ನೂ ಮುಗಿಸವ ಲೆಕ್ಕಾಚಾರದಲ್ಲಿ ಇದ್ದರು. ಆದರೆ ಹೆತ್ತವರ ಖುಷಿಗಾಗಿ ಒಂದು ದಿನ ಮೆಹೆಂದಿ, ಒಂದು ದಿನ ಅರಿಶಿಣ ಹಾಗೂ ಸಂಗೀತ್ ಕೂಡ ಮಾಡಿಕೊಂಡರು.

ಇದಕ್ಕೂ ಕಾರಣವಿದೆ ಅಂತಾರೆ ಈ ದಂಪತಿ, ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ‍್ಸ್ ಆದ ಕಾರಣ ಕೆಲಸಕ್ಕೆ ಬ್ರೇಕ್ ಕೊಡಲು ಮೆಹೆಂದಿ ಹಾಗೇ ಅರಿಶಿಣದಿಂದ ಮುಖದ ಕಾಂತಿ ಹೆಚ್ಚುತ್ತದೆ. ಇನ್ನು ಸಂಗೀತ್ ಎರಡೂ ಸಂಬಂಧಿಕರು ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸದಾವಕಾಶವಾಗಿತ್ತು.

ಹೀಗೆ ಮೂರು ದಿನಗಳ ನಂತರ ಮದುವೆ ಸಂಭ್ರಮ ದುಪ್ಪಟ್ಟಾಯ್ತು. ವೇದಿಕೆ ಮೇಲೆ ಎರಡೂ ಬದಿಯ ಹಿರಿಯರು ನಿಂತರು. ನಿವೇಥಾ ಇಪ್ಪತ್ತು ವರ್ಷದ ಹಿಂದೆ ತನ್ನಮ್ಮ ಮದುವೆಗೆ ತೊಟ್ಟ ಸೀರೆಯನ್ನೇ ಉಟ್ಟಿದ್ದರು. ಪ್ರೀತಿಯಿಂದ ವರಮಾಲೆ ತೊಟ್ಟು, ಕುಂಕುಮ ಇಟ್ಟು ಮದುವೆ ಶಾಸ್ತ್ರ ಮುಗಿಸಿದರು.

ಯಾವ ಗೋಜಿಲ್ಲದೆ, ಸಮಯ ಹೆಚ್ಚು ಕಳೆಯದೆ ತಮ್ಮಿಷ್ಟದಂತೆ ಸ್ವಾಭಿಮಾನಿ ವಿವಾಹ ಮಾಡಿಕೊಂಡರು. ಈ ದಂಪತಿಗಳು ಖುಷಿಯಾಗಿರಲಿ ಎಂದು ಆಶಿಸೋಣ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!