ಹೊಸದಿಗಂತ ವರದಿ, ಸೋಮವಾರಪೇಟೆ:
ಜಿಲ್ಲೆಯ ಸಣ್ಣ ಕಾಫಿ ಬೆಳೆಗಾರರ 10 ಎಚ್.ಪಿ.ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಕೊಡದಿದ್ದರೆ, ಜಿಲ್ಲೆಯ ಕಾಫಿ ಬೆಳೆಗಾರರು ಹಾಗು ವಿವಿಧ ಸಂಘಸಂಸ್ಥೆಗಳ ಸಹಕಾರ ಪಡೆದು ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಲಿಂಗೇರಿ ರಾಜೇಶ್ ಎಚ್ಚರಿಸಿದ್ದಾರೆ.
ಪ್ರಕೃತಿ ವಿಕೋಪ, ಅಕಾಲಿಕ ಮಳೆಯಿಂದ ಜಿಲ್ಲೆಯ ಕಾಫಿ ಬೆಳೆಗಾರ ಸಂಕಷ್ಟದಲ್ಲಿದ್ದಾರೆ. ಕಾಫಿ ಬೆಳೆಗಾರ ಹಾಗೂ ರೈತ ಸಂಘಟನೆಗಳ ಹೋರಾಟದ ಫಲವಾಗಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಕಾಫಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ಇಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸರ್ಕಾರಗಳು ಜಿಲ್ಲೆಯ ರೈತರು, ಕಾಫಿ ಬೆಳೆಗಾರರ ನೋವನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಹೀಗೆ ಶೋಷಣೆ ಮುಂದುವರಿದರೆ, ಕೊಡಗು ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಚಾಲನೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಫಿ ವಿದೇಶಿ ವಿನಿಮಯದಿಂದ ಕೋಟ್ಯಂತರ ರೂಪಾಯಿ ಸರ್ಕಾರಗಳಿಗೆ ಸಿಗುತ್ತಿದೆ. ಆದರೆ ಕಾಫಿ ತೋಟಗಳು ರೋಗಪೀಡಿತವಾಗಿವೆ. ಬೆಳೆಗಾರರು ಸಾಲಗಾರರಾಗಿ, ತೋಟಗಳನ್ನು ಪಾಳುಬೀಡುವ ಸ್ಥಿತಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಾದರೂ ಸರ್ಕಾರ ಬೆಳೆಗಾರರನ್ನು ರಕ್ಷಿಸಬೇಕು. ಕಾಫಿಯನ್ನು ಕೃಷಿ ಎಂದು ಪರಿಗಣಿಸಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕಾಫಿ ಬೆಳೆಗಾರರ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಎಂ.ಸಿ.ಮುದ್ದಪ್ಪ ಒತ್ತಾಯಿಸಿದರು.
ರಾಜ್ಯದ ಭತ್ತ, ಅಡಿಕೆ, ತೆಂಗು, ರಬ್ಬರ್ ಬೆಳೆಗಾರರಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಕಾಫಿ ಬೆಳೆಗಾರರಿಗೆ ಮಲತಾಯಿ ಧೋರಣೆ ಸರಿಯಲ್ಲ. ಕಾಫಿ ಬೆಳೆಗಾರರು ಹೋರಾಟದ ಮೂಲಕ ನ್ಯಾಯ ಪಡೆದುಕೊಳ್ಳಬೇಕಾಗಿದೆ ಎಂದು ರಾಜ್ಯ ರೈತಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಹೇಳಿದರು.
ಕಳೆದ ಆರೇಳು ವರ್ಷಗಳಿಂದ ಜಿಲ್ಲೆಯ ಕಾಫಿ ಬೆಳೆಗಾರರು ಹಾಗು ಕೃಷಿಕರು ಪ್ರತಿವರ್ಷ ಬೆಳೆಹಾನಿಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಜಿಲ್ಲಾಡಳಿತ ಪ್ರತಿವರ್ಷ ಹಸಿಸುಳ್ಳು ಹೇಳುತ್ತದೆ ಎಂದು ಸಂಘದ ಉಪಾಧ್ಯಕ್ಷ ಎ.ಆರ್.ಕುಶಾಲಪ್ಪ ದೂರಿದರು.
ಪಟ್ಟಣದಲ್ಲಿರುವ ಕೆಲ ಕಾಫಿ ಖರೀದಿದಾರರು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಕಾಫಿ ಹೆಚ್ಚಾದರೂ, ಪಟ್ಟಣದಲ್ಲಿ ಕಾಫಿ ಬೆಲೆ ಕುಸಿಯುತ್ತದೆ. ಪ್ರಸಕ್ತ ಅರೇಬಿಕಾ ಪಾಚ್೯ ಮೆಂಟ್ಗೆ 11,500 ರೂ.ಬೆಲೆ ಸಿಗಬೇಕು. ಆದರೆ 9800ರೂ. ಬೆಲೆ ನಿಗದಿ ಮಾಡಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಬೆಳೆಗಾರರ ಕಷ್ಟವನ್ನು ಕೇಳುವವರು ಇಲ್ಲದಂತಾಗಿದೆ ಎಂದು ರೈತ ಸಂಘದ ತಾಲೂಕು ಸಂಚಾಲಕ ಎಸ್.ಪಿ.ರಾಜಪ್ಪ ಆರೋಪಿಸಿದರು.