ಹೊಸದಿಗಂತ ಬೀದರ್:
ಹಿಂದು ರಾಷ್ಟ್ರೀಯ ಜಾಗರಣ ಸಮಿತಿಯಿಂದ ಇಂದು ಸಂಜೆ 4 ಗಂಟೆಗೆ ಹಮ್ಮಿಕೊಂಡಿದ್ದ ಬೃಹತ್ ಹಿಂದು ಜಾಗೃತಿ ಸಮಾವೇಶಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಜಿಲ್ಲಾಡಳಿತದ ಈ ಆದೇಶ ಹಿಂದುಗಳ ಟೀಕೆ, ಆಕ್ರೋಶಕ್ಕೆ ಗುರಿಯಾಗಿದೆ.
ಸಮಾವೇಶದಲ್ಲಿ ಪ್ರಮುಖ ಭಾಷಣ ಮಾಡಬೇಕಿದ್ದ ಹಿಂದು ಫೈರ್ ಬ್ರ್ಯಾಂಡ್ ಎನಿಸಿರುವ ಹೈದರಾಬಾದ್ ನ ಮಾಧವಿ ಲತಾ, ರಾಜಸ್ಥಾನದ ಕಾಜೋಲ್ ಹಿಂದುಸ್ತಾನಿ ಹಾಗೂ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಬೀದರ್ ಜಿಲ್ಲೆಯ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ.ಗಿರೀಶ್ ಬದೋಲೆ ಆದೇಶ ಹೊರಡಿಸಿದ್ದಾರೆ. ಇವರೆಲ್ಲರೂ ಕೋಮು ದ್ವೇಷದ ಭಾಷಣ ಮಾಡುತ್ತಾರೆ. ಒಂದು ಸಮಾಜದ ವಿರುದ್ಧ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ, ಘರ್ಷಣೆ, ಗಲಭೆಗೆ ಪ್ರಚೋದನೆ ನೀಡುತ್ತಾರೆ. ಹೀಗಾಗಿ ಶಾಂತಿ, ಕಾನೂನು ಹಾಗೂ ಸುವ್ಯವಸ್ಥೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಇವರ ಬೀದರ್ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಾಧವಿ ಲತಾ, ಕಾಜೋಲ್ ಹಿಂದುಸ್ತಾನಿ, ಪ್ರಮೋದ್ ಮುತಾಲಿಕ್ ಅವರು ದೇಶದ ವಿವಿಧೆಡೆ ಪ್ರಮೋಚದನಕಾರಿ ಭಾಷಣ ಮಾಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ನಾನಾ ಕಡೆ ಇವರ ವಿರುದ್ಧ ಕೋಮು ದ್ವೇಷ ಸೃಷ್ಟಿ ಸಂಬಂಧ ಪ್ರಕರಣ ಸಹ ದಾಖಲಾಗಿವೆ. ಇಲ್ಲಿ ಸಹ ಇವರು ಪ್ರಚೋದನಕಾರಿ ಭಾಷಣ ಮಾಡಿ ಸಮಾಜದಲ್ಲಿ ಕೋಮುದ್ವೇಷಕ್ಕೆ ಕಾರಣವಾಗಬಹುದು. ಹೀಗಾಗಿ ಇವರ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ಎಸ್ ಪಿ ಪ್ರದೀಪ್ ಗುಂಟಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇದರಂತೆ ಡಿಸಿಯವರು ಡಿ. 9ರ ಬೆಳಿಗ್ಗೆ 6ರವರೆಗೆ ಬೀದರ್ ಜಿಲ್ಲೆಗೆ ಪ್ರವೇಶಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.
ಹಿಂದು ಜಾಗೃತಿ ಸಮಾವೇಶಕ್ಕೆ ಒಂದು ತಿಂಗಳಿಂದ ತಯಾರಿ ನಡೆದಿವೆ. ಜಿಲ್ಲಾದ್ಯಂತ ವ್ಯಾಪಕ ಪ್ರಚಾರ ಮಾಡಲಾಗಿದೆ. ಸಾಯಿ ಶಾಲೆ ಆವರಣದಲ್ಲಿ ಬೃಹತ್ ವೇದಿಕೆ ಸಹ ನಿರ್ಮಿಸಲಾಗಿದೆ. ಹೀಗಿರುವಾಗ ದಿಢೀರ್ ಪ್ರಮುಖ ಭಾಷಣಕಾರರಿಗೆ ಜಿಲ್ಲಾಡಳಿತ ನಿಷೇಧ ಹೇರಿ ಕಾರ್ಯಕ್ರಮ ಮೊಟಕುಗೊಳಿಸುವಂತೆ ಮಾಡಿದೆ. ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಸಚಿವರ, ನಾಯಕರ ಒತ್ತಡ ಹಾಗೂ ತುಷ್ಟಿಕರಣ ನೀತಿಯೇ ಇದಕ್ಕೆಲ್ಲ ಕಾರಣ ಎಂದು ಆಯೋಜಕರು ಹಾಗೂ ಹಿಂದು ಸಮಾಜದ ಪ್ರಮುಖರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಘಲಕ್ ಆಡಳಿತದ ಈ ಸರ್ಕಾರಕ್ಕೆ ಹಿಂದು ಸಮಾಜ ತಕ್ಕ ಪಾಠ ಕಲಿಸಲಿದೆ ಎಂದು ಘರ್ಜಿಸಿದ್ದಾರೆ.