Tuesday, August 16, 2022

Latest Posts

ಕರೆಂಟಿಲ್ಲ, ನೀರಿಲ್ಲ, ರೋಡಿಲ್ಲ,ಶೌಚಾಲಯವೂ ಇಲ್ಲ.. ಮುರುಕಲು ಮನೆಯಲ್ಲಿ ಸಂಕಷ್ಟದ ಬದುಕು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಐ.ಬಿ. ಸಂದೀಪ್ ಕುಮಾರ್
ಪುತ್ತೂರು: ಆಗಲೋ ಈಗಲೋ ಬೀಳುವಂತಿರುವ ಮಣ್ಣಿನ ಗೋಡೆಯ ಮನೆ, ವಿದ್ಯುತ್ ಸಂಪರ್ಕವೇ ಇಲ್ಲದೆ ದೀಪದ ಬೆಳಕಿನಲ್ಲಿ ಮನೆಯ ಕತ್ತಲು ಹೋಗಲಾಡಿಸುವ ಈ ಕುಟುಂಬಕ್ಕೆ ದೇಹಬಾಧೆಯನ್ನು ತೀರಿಸಲು ಶೌಚಾಲಯದ ವ್ಯವಸ್ಥೆಯೂ ಇಲ್ಲದಂತಹ ಪರಿಸ್ಥಿತಿ. ರಸ್ತೆಯ ಸೌಕರ್ಯವಿಲ್ಲದೆ ಸುಮಾರು ಒಂದೂವರೆ ಕಿ.ಮೀ. ದೂರ ನಡೆದುಕೊಂಡೇ ಹೋಗಬೇಕಾದಂತಹ ದುಃಸ್ಥಿತಿ. ಇದು ಬುದ್ಧಿವಂತರ ಜಿಲ್ಲೆಯೆಂದೆನಿಸಿರುವ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ವಾಸಿಸುತ್ತಿರುವ ಮೂಲಸೌಲಭ್ಯ ವಂಚಿತ ಕುಟುಂಬವೊಂದರ ಕಣ್ಣೀರ ಕತೆ.
ಪತಿ ನಾರಾಯಣ ನಾಯ್ಕ್, ಪತ್ನಿ ಹರಿಣಾಕ್ಷಿ ಮತ್ತು ಓರ್ವ ಪುತ್ರಿ ಪ್ರತಿಜ್ಞಾ ಅವರನ್ನು ಒಳಗೊಂಡಿರುವ ಬಡ ಪುಟ್ಟ ಕುಟುಂಬಕ್ಕೆ ಕೂಲಿ ಕೆಲಸವೇ ಜೀವನಾಧಾರ. ತಂದೆ-ತಾಯಿ ಕೂಲಿ ಕೆಲಸ ಮಾಡಿ ಸಂಪಾದಿಸಿದರೆ ಅಂದಿನ ದಿನಕ್ಕೆ ಹೊಟ್ಟೆಗೆ ಯಾವುದೇ ತತ್ವಾರ ಇರುವುದಿಲ್ಲ. ನಿತ್ಯದ ದುಡಿಮೆಯಿಂದ ಒಂದಿಷ್ಟು ಉಳಿತಾಯ ಮಾಡಿ ತಮ್ಮ ಪುತ್ರಿಗೆ ಶಿಕ್ಷಣ ನೀಡುತ್ತಿದ್ದಾರೆ. ಪ್ರಸ್ತುತ ಎಸ್ಸೆಸೆಲ್ಸಿ ತರಗತಿಯಲ್ಲಿರುವ ಪ್ರತಿಜ್ಞಾಗೆ ಆನ್‌ಲೈನ್ ಮೂಲಕ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ. ಆದರೆ, ಮನೆಗೆ ವಿದ್ಯುತ್ ಇಲ್ಲದಿದ್ದರೆ ಮೊಬೈಲ್ ಚಾರ್ಚ್ ಮಾಡುವುದಾದರೂ ಹೇಗೆ?
ಮಳೆ ಬಂದ ದಿನವೇ ಕರಾಳ ರಾತ್ರಿ
ಇದೇ ಫೆ. 22 ರಂದು ಪುತ್ತೂರಿನ ಎಲ್ಲೆಡೆಯೂ ಭಾರೀ ಮಳೆ. ರಾತ್ರಿ 8:30ಕ್ಕೆ ಈ ಭಾರೀ ಮಳೆಗೆ ಈ ಬಡ ಕುಟುಂಬದ ಮನೆಯ ಮೇಲೆ ಮರವೊಂದು ಅಪ್ಪಳಿಸಿತು. ಈ ಸಂದರ್ಭ ತಾಯಿ, ಮಗಳು ಮನೆಯೊಳಗಡೆ ಇದ್ದರು. ಆದರೆ, ಅವರು ಅಪಾಯದಿಂದ ಪಾರಾಗಿದ್ದರು. ಇದಾದ ಬಳಿಕ ಪಂಚಾಯತ್‌ನವರು ಬಂದು ಮನೆಯ ಫೋಟೋ ತೆಗೆದುಕೊಂಡು ಹೋದರು. ಮನೆ ಹಾನಿಗೆ ಸರಕಾರದಿಂದ ಪರಿಹಾರ ಸಿಗುತ್ತದೆ ಎಂದೆಲ್ಲಾ ಹೇಳಿ ಹೋದರು. ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ದೊರಕುವುದೆಂಬ ನಿರೀಕ್ಷೆಯಲ್ಲಿ ಈ ಬಡ ಕುಟುಂಬ ದಿನ ಲೆಕ್ಕ ಹಾಕಲಾರಂಭಿಸಿತು. ಈ ಘಟನೆ ನಡೆದು ಸುಮಾರು ಎರಡೂವರೆ ತಿಂಗಳಾಗುತ್ತಾ ಬಂತು. ಆದರೆ, ಇದುವರೆಗೂ ಚಿಕ್ಕಾಸೂ ಸರಕಾರದಿಂದ ದೊರಕಲಿಲ್ಲ.
ಬೆಂಬಿಡದೆ ಸಂಕಷ್ಟಗಳ ಸುರಿಮಳೆ
ಮರ ಬಿದ್ದು ಮನೆ ಹಾನಿಗೊಳಗಾದ ಬಳಿಕ ಈ ಕುಟುಂಬ ಇತರೆಡೆ ತೆರಳಿ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ. ಇದರ ಮಧ್ಯೆ ಕೊರೋನಾ ಮಹಾಮಾರಿಯಿಂದಾಗಿ ದುಡಿಯುವ ಕೈಗಳಿಗೆ ಕೆಲಸವೂ ಇಲ್ಲದಂತಾಗಿದೆ. ಕೈಯಲ್ಲಿ ದುಡ್ಡಿಲ್ಲದೆ ಮನೆ ಬಾಡಿಗೆಯನ್ನೂ ಕಟ್ಟಲಾಗದ ಪರಿಸ್ಥಿತಿ. ‘ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷೀಲಿ…’ ಎಂಬಂತೆ ಈ ಬಡ ಕುಟುಂಬಕ್ಕೆ ದುಡಿದು ನೆಮ್ಮದಿಯಿಂದ ಬದುಕುವ ಅವಕಾಶವನ್ನೂ ವಿಧಿ ಕಿತ್ತುಕೊಂಡಿದೆ. ಅತ್ತ ಮನೆಯೂ ದುರಸ್ತಿಯಾಗದೆ, ಇತ್ತ ಬಾಡಿಗೆ ಮನೆಯ ಬಾಡಿಗೆ ಕಟ್ಟಲು ದುಡಿದು ಸಂಪಾದಿಸುವ ಎಂದರೆ ಕೆಲವೂ ಇಲ್ಲದಂತಾಗಿದೆ.
ಪರಿಹಾರ ದೊರಕಲೆಷ್ಟು ಸಮಯ ಬೇಕು?
ಮಳೆಯಿಂದ ಕಡು ಬಡವರ ಮನೆ ಹಾನಿಗೊಳ ಗಾಗಿದ್ದರೂ ಅದಕ್ಕೆ ತಕ್ಷಣ ಪರಿಹಾರ ಒದಗಿಸಿ ಕೊಡುವಂತಹ ಮಾನವೀಯತೆ ಅಧಿಕಾರಿ ವರ್ಗದಲ್ಲಿ ಇಲ್ಲದಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಆ ಮನೆಯನ್ನು ಕಂಡಾಗಲೇ ಬಡತನದ ಭೀಕರತೆ ಸಾಕ್ಷಿಯನ್ನು ಹೇಳುತ್ತದೆ. ಆದರೆ, ಪಂಚಾಯತ್‌ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಫೋಟೋ ತೆಗೆದುಕೊಂಡು ಹೋದವರ ಪತ್ತೆಯೇ ಇಲ್ಲದಂತಾಗಿದೆ. ಈ ಕುರಿತು ವಿಚಾರಿಸಿದರೆ ತಮ್ಮ ಜವಾಬ್ದಾರಿಯನ್ನು ಇನ್ನೊಬ್ಬ ಅಧಿಕಾರಿಯ ಹೆಗಲ ಮೇಲೆ ಜಾರಿಸಿಬಿಡುತ್ತಿದ್ದಾರೆ. ಜನಪ್ರತಿನಿಧಿಗಳಿಗೂ ಈ ಕುಟುಂಬದ ಕಣ್ಣೀರ ಕತೆ ಕಣ್ಣೆದುರು ಬಾರದೇ ಇರುವುದು ವಿಷಾದನೀಯವೇ ಸರಿ…! ಸಂಘಟನೆಯೊಂದರ ಪ್ರಮುಖರೋರ್ವರು ಈ ಕುಟುಂಬದ ನರಕಯಾತನೆಯನ್ನು ಕಂಡು ಜಿಲ್ಲಾಧಿಕಾರಿ, ಎಸ್ಪಿಯವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಎಸ್ಪಿ ಅವರು ತಕ್ಷಣವೇ ಪುತ್ತೂರು ನಗರ ಠಾಣೆ ಎಸ್‌ಐ ಜಂಬೂರಾಜ್ ಮಹಾಜನ್ ಅವರಿಗೆ ದೂರವಾಣಿ ಮಾಡಿ ಕ್ರಮಕ್ಕೆ ಸೂಚಿಸಿದ್ದರು. ಈ ಕುಟುಂಬವನ್ನು ಬೇರೆಡೆ ಸ್ಥಳಾಂತರಿಸಲಾಯಿತಾದರೂ ಅದೇನೂ ಶಾಶ್ವತ ಪರಿಹಾರವಾಗಿರಲಿಲ್ಲ. ಅಂದಿನಿಂದ ಇಂದಿನ ವರೆಗೂ ಈ ಕುಟುಂಬ ಮನೆ ರಿಪೇರಿಗಾಗಿ ಸರಕಾರದ ಸಹಾಯದ ನಿರೀಕ್ಷೆಯಲ್ಲೇ ದಿನಗಳೆಯುತ್ತಿದೆ.
ಸಂಕಷ್ಟಕ್ಕೆ ಸ್ಪಂದಿಸುವವರಿಲ್ಲ
ನಾವು ಕೂಲಿ ನಾಲಿ ಮಾಡಿಕೊಂಡು ಗೌರವಯುತವಾಗಿ ಬದುಕು ಸಾಗಿಸುತ್ತಿದ್ದೇವೆ. ಆದರೆ, ಜನನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸರಕಾರದಿಂ ಮನೆಗೆ ಸೋಲಾರ್ ಸಿಕ್ಕಿಸಿದ್ದಾರೆ. ಅದೂ ಕೂಡಾ ಬಿಸಿಲು ಇದ್ದರೆ ಒಂದಿಷ್ಟು ಹೊತ್ತು ಉರಿಯುತ್ತದೆ. ಇಲ್ಲದಿದ್ದರೆ ಇಲ್ಲ. ನಮ್ಮ ಮನೆ ಮಳೆಯಿಂದ ಹಾನಿಗೊಳಗಾಗಿದ್ದರೂ ನಮಗೆ ಪರಿಹಾರ ದೊರಕಿಸಿಕೊಡುವವರಿಲ್ಲ. ಕೊರೋನಾದಿಂದಾಗಿ ಕೆಲವೂ ಇಲ್ಲದಂತಹ ಸಂಕಷ್ಟದ ಬದುಕು ನಮ್ಮದಾಗಿದೆ ಎನ್ನುತ್ತಾರೆ ಮನೆಯ ಮಹಿಳೆ ಹರಿಣಾಕ್ಷಿ.
ಶೀಘ್ರ ಪರಿಹಾರ ದೊರಕದಿದ್ದರೆ ಧರಣಿ
ಬಡ ಕುಟುಂಬವನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಲಾಗಿದೆ. ಆದರೆ, ಆ ಮನೆಯ ಬಾಡಿಗೆ, ಖರ್ಚು ವೆಚ್ಚ ನೀಡುವರಾರು? ನಾವು ಸಂಘಟನೆಯಿಂದ ಒಂದಿಷ್ಟು ಸಹಾಯ ಮಾಡಿದ್ದೇವೆ. ತಹಶೀಲ್ದಾರ ಬಳಿ ಮಾತನಾಡಿದಾಗ, ಗ್ರಾಮ ಕರಣಿಕರ ಬಳಿ ಮಾತನಾಡಲು ಹೇಳಿದ್ದರು. ಆದರೆ, ಇದಕ್ಕೆ ಜಿ.ಪಂ.ನಿಂದ ಅನುದಾನ ದೊರಕಬೇಕು ಎಂದು ಗ್ರಾಮ ಕರಣಿಕರು ಹೇಳುತ್ತಾರೆ. ಒಂದು ವಾರದೊಳಗೆ ಪರಿಹಾರ ದೊರಕದಿದ್ದರೆ ಈ ಕುಟುಂಬವನ್ನು ತಾಲೂಕು ಕಚೇರಿ ಎದುರು ಕೂರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಗಿರಿಧರ್ ನಾಯ್ಕ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss