ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕಾರಿ ಉದ್ಯೋಗದಲ್ಲಿರುವ ವ್ಯಕ್ತಿಗಳನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರಿ ಅಧಿಕಾರಿಯೊಬ್ಬರಿಗೆ ರಾಜ್ಯ ಚುನಾವಣಾ ಆಯುಕ್ತರ ಹೆಚ್ಚುವರಿ ಜವಾಬ್ದಾರಿ ವಹಿಸುವುದು ಸಂವಿಧಾನದ ಅಪಹಾಸ್ಯ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಯಾವುದೇ ರಾಜ್ಯದ ಚುನಾವಣಾ ಆಯುಕ್ತರು ಸ್ವತಂತ್ರ ವ್ಯಕ್ತಿಗಳಾಗಿರಬೇಕು ಹಾಗೂ ರಾಜ್ಯ ಸರ್ಕಾರದಿಂದ ನೇಮಕಗೊಂಡಿರಬಾರದು ಎಂಬ ಹೈಕೋರ್ಟ್ ತೀರ್ಪನ್ನು ನ್ಯಾಯಮೂರ್ತಿಗಳಾದ ರೊಹಿಂಗ್ಟನ್ ಫಾಲಿ ನಾರಿಮನ್, ಬಿಆರ್ ಗವಾಯಿ ಮತ್ತು ಹೃಷಿಕೇಶ್ ರಾಯ್ ಅವರ ನೇತೃತ್ವದ ನ್ಯಾಯಪೀಠ ಎತ್ತಿಹಿಡಿಯಿತು.
ಗೋವಾದ ರಾಜ್ಯ ಚುನಾವಣಾ ಆಯೋಗವು ಮಾರ್ಗೋವಾ, ಮಪುಸಾ, ಮರ್ಮುಗೋವಾ, ಸಾಂಗುಯೆಮ್ ಮತ್ತು ಕುಪೆಮ್ ಪಾಲಿಕೆಗಳಿಗೆ ಚುನಾವಣಾ ಅಧಿಸೂಚನೆ ಹೊರಡಿಸಿದ್ದನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ತೀರ್ಪು ನೀಡಲಾಗಿದೆ.